ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಹಾರ ಸರ್ಕಾರ, ಸಿಬಿಐ ವಿಚಾರಣೆಗೆ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳುಹಿಸಿತ್ತು. ಈಗ ಬಿಹಾರ ಸರ್ಕಾರದ ಈ ಶಿಫಾರಸನ್ನು ಕೇಂದ್ರ ಅನುಮೋದಿಸಿದೆ. ಸುಶಾಂತ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ್ದೇವೆ ಎಂದು ಕೇಂದ್ರ ಸರ್ಕಾರದ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ತಿಳಿಸಿದ್ದಾರೆ.
ಸುಶಾಂತ್ ಪ್ರಕರಣವನ್ನು ಇನ್ಮುಂದೆ ಸಿಬಿಐ ತನಿಖೆ ನಡೆಸಲಿದೆ. ಸಿಬಿಐ ತನಿಖೆ ನಡೆಸುವಂತೆ ಅನೇಕ ದಿನಗಳಿಂದ ಒತ್ತಾಯ ಕೇಳಿ ಬಂದಿತ್ತು. ಸಿಬಿಐಯೊಂದಿಗೆ ಪ್ರಕರಣದ ತನಿಖೆ ನಡೆಸಲು ಬಿಹಾರ ಸರ್ಕಾರದ ಶಿಫಾರಸನ್ನು ಅಂಗೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರಿ ಪರ ವಕೀಲ ಎಸ್.ಜಿ. ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ನಲ್ಲಿ ತಿಳಿಸಿದ್ದಾರೆ.
ಮುಂಬೈ ಪೊಲೀಸ್ ಹಾಗೂ ಬಿಹಾರ ಪೊಲೀಸ್ ಮಧ್ಯೆ ಈ ಬಗ್ಗೆ ಜಟಾಪಟಿಯಿತ್ತು. ಈ ಮಧ್ಯೆ ಬಿಹಾರ ಸರ್ಕಾರ ಸಿಬಿಐಗೆ ಶಿಫಾರಸ್ಸು ಮಾಡಿದ್ದು ಅನೇಕರ ಕೋಪಕ್ಕೆ ಕಾರಣವಾಗಿತ್ತು. ಈಗಾಗಲೇ ಅರ್ಧ ತನಿಖೆ ನಡೆದಿದೆ. ಮತ್ತೆ ಸಿಬಿಐಗೆ ವಹಿಸುವುದು ಎಷ್ಟು ಸರಿ ಎನ್ನಲಾಗಿತ್ತು. ಸುಶಾಂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಈವರೆಗೆ 59 ಜನರ ಸಾಕ್ಷ್ಯವನ್ನು ದಾಖಲಿಸಿದ್ದಾರೆ.