ಕೇರಳದ ವೈದ್ಯಕೀಯ ವಿದ್ಯಾರ್ಥಿಗಳು ರಸ್ಪುಟಿನ್ ಹಾಡಿಗೆ ಹೆಜ್ಜೆ ಹಾಕಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಸೆಟ್ ಮಾಡಿತ್ತು. ಕೆಲವರು ವಿದ್ಯಾರ್ಥಿಗಳಿಬ್ಬರ ನೃತ್ಯಕ್ಕೆ ಮನಸೋತಿದ್ದರೆ ಇನ್ನೂ ಕೆಲವರು ಇದೊಂದು ಲವ್ ಜಿಹಾದ್ ಅಂತಾ ಆಕ್ರೋಶ ಹೊರಹಾಕಿದ್ದರು.
ಇದಾದ ಬಳಿಕ ತಿರುವನಂತಪುರ ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಸಾಕಷ್ಟು ಮಂದಿ ವಿದ್ಯಾರ್ಥಿಗಳ ಪರ ನಿಂತಿದ್ದರು. ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದೇ ಹಾಡಿಗೆ ನೃತ್ಯ ಮಾಡುವ ಮೂಲಕ ತಮ್ಮ ಬೆಂಬಲವನ್ನ ಸೂಚಿಸಿದ್ದರು.
ಇದೀಗ ಶಶಿ ತರೂರ್ ಈ ಸಂಬಂಧ ಇನ್ನೊಂದು ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಓರ್ವ ಹಿಂದು, ಓರ್ವ ಮುಸ್ಲಿಂ ಹಾಗೂ ಇನ್ನೊಬ್ಬ ಕ್ರಿಶ್ಚಿಯನ್ ಧರ್ಮದ ಧಿರಿಸುಗಳನ್ನ ಧರಿಸಿದ್ದಾರೆ. ಇವರೂ ಸಹ ಇದೇ ಹಾಡಿಗೆ ನೃತ್ಯ ಮಾಡಿದ್ದಾರೆ. ದೇಗುಲ, ಮಸೀದಿ ಹಾಗೂ ಚರ್ಚ್ ಮುಂದೆ ನೃತ್ಯ ಮಾಡುವ ಮೂಲಕ ಕಲೆಗೆ ಧರ್ಮದ ಹಂಗಿಲ್ಲ ಎಂಬ ಸಂದೇಶ ಸಾರಿದಂತಿದೆ.
ಕೇರಳ ಎಂದಿಗೂ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನ ಸಾರುತ್ತಲೇ ಇದೆ. ನಮ್ಮ ರಾಜ್ಯದಲ್ಲಿ ಕೋಮು ವೈರಸ್ ಹರಡಲು ನಾವು ಬಿಡೋದಿಲ್ಲ ಎಂದು ಈ ವಿಡಿಯೋಗೆ ಶಶಿ ತರೂರ್ ಶೀರ್ಷಿಕೆ ನೀಡಿದ್ದಾರೆ.
ತ್ರಿಶೂರ್ ಮೆಡಿಕಲ್ ಕಾಲೇಜಿನ ಜಾನಕಿ ಓಂಕುಮಾರ್ ಹಾಗೂ ನವೀನ್ ರಜಾಕ್ ಈ ಹಾಡಿಗೆ ನೃತ್ಯ ಮಾಡಿದ್ದ ಬಳಿಕ ಭಾರೀ ಟ್ರೆಂಡ್ ಕ್ರಿಯೇಟ್ ಆಗಿತ್ತು. ಇದಕ್ಕೆ ಅನೇಕರು ಕೋಮು ಬಣ್ಣವನ್ನೂ ಬಳಿದಿದ್ದರು. ಈ ವಿಡಿಯೋ ನೋಡಿದ ವಕೀಲರೊಬ್ಬರು ಜಾನಕಿ ಪೋಷಕರಿಗೆ ಲವ್ ಜಿಹಾದ್ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು.