![](https://kannadadunia.com/wp-content/uploads/2020/08/RAM22-1.jpg)
ದೂರದರ್ಶನದ ಎವರ್ಗ್ರೀನ್ ಹಿಟ್ ರಾಮಾಯಣ ಧಾರಾವಾಹಿಯ ತಾರಾಗಣದ ಮುಂಚೂಣಿ ಪಾತ್ರಗಳಲ್ಲಿ ಅಭಿನಯಿಸಿದ್ದ ಅರುಣ್ ಗೋವಿಲ್, ದೀಪಿಕಾ ಚಿಕ್ಲಿಯಾ ಹಾಗೂ ಸುನೀಲ್ ಲಹಿರಿ ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ ವಿಚಾರವಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
1987ರಲ್ಲಿ ಕಿರುತೆರೆಗೆ ಬಂದ ಈ ಧಾರಾವಾಹಿಯಲ್ಲಿ ಅರುಣ್, ದೀಪಿಕಾ ಹಾಗೂ ಸುನೀಲ್ ಕ್ರಮವಾಗಿ ಶ್ರೀರಾಮ ಚಂದ್ರ, ಸೀತೆ ಹಾಗೂ ಲಕ್ಷ್ಮಣ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ನಟರು ತಂತಮ್ಮ ಟ್ವಿಟರ್ ಖಾತೆಗಳಲ್ಲಿ ಖುಷಿ ಹಂಚಿಕೊಂಡಿದ್ದಾರೆ.
“ಈ ದಿನವನ್ನು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುವುದು. ಶ್ರೀರಾಮ ದೇವಸ್ಥಾನಕ್ಕೆ ಪ್ರತಿಷ್ಠಾನದ ಶಿಲೆ ಇಡುವ ಮೂಲಕ ಜಗತ್ತಿನಾದ್ಯಂತ ಇರುವ ಶ್ರೀರಾಮಚಂದ್ರರ ಭಕ್ತರ ಕನಸು ನನಸಾಗುತ್ತಿದೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಜೈ ಶ್ರೀ ರಾಮ್” ಎಂದು ಅರುಣ್ ಗೋವಿಲ್ ಟ್ವೀಟ್ ಮಾಡಿದ್ದಾರೆ.
“ಇದು ಎಲ್ಲ ಭಾರತೀಯರಿಗೂ ಒಂದು ದೊಡ್ಡ ವಿಜಯ. ದೀಪ ಹಚ್ಚಿಕೊಂಡು, ರಾಮನಾಮ ಜಪ ಮಾಡಿ” ಎಂದು ದೀಪಿಕಾ ಚಿಕ್ಲಿಯಾ ಬರೆದಿದ್ದಾರೆ.
“ಇಂದು ಆಗಸ್ಟ್ 5, ಐತಿಹಾಸಿಕ ದಿನ. 500 ವರ್ಷಗಳ ಹಳೆಯ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವ ಮೂಲಕ ಆಗಸ್ಟ್ 15ರಂತೆಯೇ, ಈ ದಿನವು ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ದಿನವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಜೈ ಸಿಯಾರಾಮ್” ಎಂದು ಸುನೀಲ್ ಲಹಿರಿ ಸಹ ಟ್ವೀಟ್ ಮಾಡಿದ್ದಾರೆ.