ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ತೆರಿಗೆ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ದು ಇದಕ್ಕೆ ಆಕ್ಷೇಪಿಸಿದ ಕೋರ್ಟ್ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಚೆನ್ನೈನ ಕೋಡಂಬಾಕ್ಕಂನಲ್ಲಿ ರಜನಿಕಾಂತ್ ಮಾಲೀಕತ್ವದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪ ಇದೆ. ಈ ಕಲ್ಯಾಣ ಮಂಟಪಕ್ಕೆ ಗ್ರೇಟರ್ ಚೆನ್ನೈ ಕಾರ್ಪೋರೇಶನ್ ತೆರಿಗೆ ಕಟ್ಟುವಂತೆ ಹೇಳಿದ್ದು 6.50 ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕಿದೆ.
ಆದರೆ, ಸೂಪರ್ ಸ್ಟಾರ್ ರಜನಿಕಾಂತ್ ತೆರಿಗೆ ಪಾವತಿಸಲು ನಿರಾಕರಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಯಾವುದೇ ಕಾರ್ಯಕ್ರಮಗಳು ನಡೆದಿರಲಿಲ್ಲ. ಹಾಗಾಗಿ ಆದಾಯವಿಲ್ಲದ ಕಾರಣ ತೆರಿಗೆ ಪಾವತಿಸಲು ಆಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ತೆರಿಗೆ ಪಾವತಿಸುವ ವಿಚಾರಕ್ಕೆ ನ್ಯಾಯಾಲಯಕ್ಕೆ ಬಂದಿರುವುದಕ್ಕೆ ದಂಡ ವಿಧಿಸುವುದು ಅನಿವಾರ್ಯವಾಗುತ್ತೆ ಎಂದು ಕೋರ್ಟ್ ರಜನಿಕಾಂತ್ ಅವರಿಗೆ ಎಚ್ಚರಿಕೆ ನೀಡಿದೆ. ಇದಾದ ನಂತರದಲ್ಲಿ ಅವರ ಪರ ವಕೀಲರು ತೆರಿಗೆ ಅರ್ಜಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ರಜನಿಕಾಂತ್ 6.5 ಲಕ್ಷ ರೂ. ತೆರಿಗೆ ಪಾವತಿಸದೇ ಕೋರ್ಟ್ ಮೆಟ್ಟಿಲೇರಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.