ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ದಾಂಪತ್ಯದಲ್ಲಿ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಸ ಉಂಟಾಗಿದೆ. ಇಬ್ಬರ ನಡುವೆ ಕಲಹವಾಗಿದ್ದು ಶಿಲ್ಪಾಶೆಟ್ಟಿ ಗಂಡನಿಂದ ಬೇರೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧಿತನಾಗಿರುವ ರಾಜ್ ಕುಂದ್ರಾನನ್ನು ಪೊಲೀಸರು ವಿಚಾರಣೆಗೆಂದು ಮನೆಗೆ ಕರೆದುಕೊಂಡು ಬಂದಿದ್ದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಆಕ್ರೋಶದ ವರ್ತನೆ ತೋರಿದ್ದಾರೆ. ಪೊಲೀಸರೊಂದಿಗೆ ಮನೆಗೆ ಬಂದಿದ್ದ ಪತಿಯನ್ನು ಕಂಡ ಶಿಲ್ಪಾಶೆಟ್ಟಿ ಜೋರಾಗಿ ಕೂಗಾಡಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿರುವ ಶಿಲ್ಪಾ ಶೆಟ್ಟಿ, ಇಂತಹ ಕೃತ್ಯದಲ್ಲಿ ಭಾಗಿಯಾದ ಕುಂದ್ರಾ ಬಗ್ಗೆ ಬೇಸರಗೊಂಡಿದ್ದಾರೆ.
ಇಂತಹ ಪ್ರಕರಣದಿಂದ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ಬಂದಿದೆ. ಇಷ್ಟು ವರ್ಷದ ಖ್ಯಾತಿ ಮಣ್ಣುಪಾಲಾಗಿದೆ ಎಂದು ಆಕ್ರೋಶಗೊಂಡ ಶಿಲ್ಪಾಶೆಟ್ಟಿ ಗಂಡನಿಗೆ ಗುಡ್ ಬೈ ಹೇಳಬಹುದೆಂದು ಚರ್ಚೆಯಾಗುತ್ತಿದೆ. ಘಟನೆಯಿಂದ ಶಾಕ್ ಗೆ ಒಳಗಾಗಿರುವ ಶಿಲ್ಪಾ ಶೆಟ್ಟಿ ಕುಟುಂಬದವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಈ ನಡುವೆ ಬ್ಲೂ ಫಿಲಂ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾಗೆ ಸೇರಿದ ಉತ್ತರಪ್ರದೇಶದ ಕಾನ್ಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ 2 ಖಾತೆಗಳನ್ನು ಪೊಲೀಸರು ತಡೆ ಹಿಡಿದಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿರುವವರು ಮಾಫಿ ಸಾಕ್ಷಿಗಳಾಗಿ ಬದಲಾಗಿದ್ದಾರೆ ಎನ್ನಲಾಗಿದೆ.