ಬೆಂಗಳೂರು: ನನ್ನ ಕಷ್ಟದ ಸಮಯದಲ್ಲಿ ಜೊತೆಯಾಗಿ ಇದ್ದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ನಟಿ ರಾಗಿಣಿ ಹೇಳಿದ್ದಾರೆ.
ಜೈಲಿನಿಂದ ಹೊರಬಂದ ಅವರು ಮಾತನಾಡಿ, ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇತ್ತು. ಅಭಿಮಾನಿಗಳು, ಹಿತೈಷಿಗಳಿಗೆ ಧನ್ಯವಾದ ಹೇಳುತ್ತೇನೆ. ಇದಕ್ಕಾಗಿ ಹೋರಾಟ ನಡೆಸಿದ್ದೇವೆ. ಇಂತಹ ಸಂದರ್ಭದಲ್ಲಿ ಜೊತೆಗಿದ್ದ ಎಲ್ಲರಿಗೂ ಹೃದಯಪೂರ್ವಕ ನಮಸ್ಕಾರಗಳು ಎಂದು ಹೇಳಿದ್ದಾರೆ.
ಸತ್ಯಮೇವ ಜಯತೆ ಎನ್ನುವುದು ಸಾಬೀತಾಗಿದೆ. ಈಗ ಕುಟುಂಬದವರೊಂದಿಗೆ ಸಮಯ ಕಳೆಯಬೇಕಿದೆ. ಶೀಘ್ರವೇ ಪತ್ರಿಕಾಗೋಷ್ಠಿ ಕರೆದು ಎಲ್ಲ ವಿಷಯದ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಅವರಿಗೆ ಸುಪ್ರೀಂಕೋರ್ಟ್ ನಾಲ್ಕು ದಿನಗಳ ಹಿಂದೆ ಜಾಮೀನು ನೀಡಿತ್ತು. ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ, ಜೈಲಿನಿಂದ ರಾಗಿಣಿ ಹೊರಬಂದಿದ್ದಾರೆ. ಕುಟುಂಬದವರೊಂದಿಗೆ ಜಡೆ ಮುನೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.