ಪ್ರೇಮಿಗಳ ದಿನವೇ ʻರಾಧೆ ಶ್ಯಾಮ್ʼ ಟೀಸರ್ ರಿಲೀಸ್ ಆಗಿದ್ದು ಟೀಸರ್ ಮೂಲಕ ಪ್ರಭಾಸ್-ಪೂಜಾ ಹೆಗ್ಡೆ ಮೋಡಿ ಮಾಡಿದ್ದಾರೆ. ಅಂದ ಹಾಗೇ, ಜುಲೈ 30 ರಂದು ʻರಾಧೆ ಶ್ಯಾಮ್ʼ ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ.
ಪ್ರಭಾಸ್-ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈಗಾಗಲೇ ಪೋಸ್ಟರ್‌ನಿಂದಲೇ ಭಾರಿ ಸದ್ದು ಮಾಡಿದೆ. ವ್ಯಾಲಂಟೈನ್ಸ್ ಡೇ ಪ್ರಯುಕ್ತ ಚಿತ್ರ ತಂಡ UV Creations Youtube Channel ನಲ್ಲಿ ಇಂದು ಟೀಸರ್ ಬಿಡುಗಡೆ ಮಾಡಿದೆ.
ರೋಮ್‌ನ ಅತ್ಯಂತ ರಮಣೀಯ ಪ್ರದೇಶವೊಂದರ ದೃಶ್ಯಗಳೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ರೊಮೇನಿಯನ್ ರೈಲ್ವೆ ನಿಲ್ದಾಣದಲ್ಲಿ ಜನಸಮೂಹದ ನಡುವೆ ಪ್ರಭಾಸ್ – ಪೂಜಾ ಹೆಗ್ಡೆಯನ್ನ ಹುಡುಕುತ್ತಾ ಇಟಾಲಿಯನ್ ಭಾಷೆಯಲ್ಲಿ ಕರೆಯುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ. ಆ ನಂತರ ಇಬ್ಬರ ನಡುವಿನ ಪ್ರೀತಿಯ ಸಂಭಾಷಣೆ ಹೈಲೈಟ್ ಆಗಿದೆ.
ಆಕರ್ಷಕ ತಾಣ ರೋಮ್ ಮತ್ತು ಅಲ್ಲಿನ ಸುಂದರ ಪ್ರದೇಶಗಳಲ್ಲಿ ʻರಾಧೆ ಶ್ಯಾಮ್ʼ ಚಿತ್ರೀಕರಣಗೊಂಡಿದ್ದು, ಚಿತ್ರರಸಿಕರಿಗೆ ರಸದೌತಣ ನೀಡಲಿದೆ. ಇದರ ಝಲಕ್ ನ ಮೊದಲ ವಿಡಿಯೋದ ಮೂಲಕ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದೆ ಚಿತ್ರತಂಡ. ಈ ದಶಕದ ಅತಿದೊಡ್ಡ ಪ್ರೇಮಕಥೆ ಅಂತಲೇ ಬಿಂಬಿತವಾಗಿರೋ ʻರಾಧೆ ಶ್ಯಾಮ್ʼ ಬಹುಭಾಷಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ವಂಶಿ, ಪ್ರಮೋದ್ ನಿರ್ಮಿಸಿದ್ದಾರೆ.