ರಾಯಚೂರು: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್ ನ ವಿಕಲಚೇತನ ರೈತ ಕರ್ರಿ ಸತ್ಯನಾರಾಯಣ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ವಿವಿಧ ತಳಿಯ ಭತ್ತದ ಬೀಜ ಬಳಸಿಕೊಂಡು ಪುನೀತ್ ರಾಜಕುಮಾರ್ ಫೋಟೋ ಮಾದರಿಯಲ್ಲಿ ಭತ್ತ ಬೆಳೆದಿದ್ದಾರೆ.
ಅಕ್ಟೋಬರ್ 29 ರಂದು ಪುನೀತ್ ರಾಜಕುಮಾರ್ ಆಗಲಿ ಎರಡು ವರ್ಷವಾಗಲಿದ್ದು, ಎರಡನೇ ಪುಣ್ಯ ಸ್ಮರಣೆಯನ್ನು ವಿಶೇಷವಾಗಿ ಆಚರಿಸಲು ಪುನೀತ್ ರಾಜಕುಮಾರ್ ಫೋಟೋವನ್ನು ಭತ್ತದ ಪೈರಿನಲ್ಲಿ ಅರಳಿಸಿ ಅಭಿಮಾನಿ ಕರ್ರಿ ಸತ್ಯನಾರಾಯಣ ಅಭಿಮಾನ ತೋರಿದ್ದಾರೆ.
ತಮ್ಮ ಎರಡು ಎಕರೆ ಜಮೀನಿನಲ್ಲಿ ಗುಜರಾತ್ ರಾಜ್ಯದಿಂದ ತಂದ ಗೋಲ್ಡನ್ ರೋಸ್ ಮತ್ತು ಕಾಲಾಭಟ್ಟಿ ಕಪ್ಪು ಬಣ್ಣದ ಭತ್ತದ ತಳಿ ಜೊತೆಗೆ ಸ್ಥಳೀಯ ಸೋನಾಮಸೂರಿ ತಳಿಯ 100 ಕೆಜಿ ಭತ್ತದ ಬೀಜ ಬಳಸಿಕೊಂಡು ಪುನೀತ್ ರಾಜಕುಮಾರ್ ರೀತಿ ಕಾಣುವಂತೆ ಭತ್ತ ಬೆಳೆಯಲಾಗಿದೆ.
ಎತ್ತರದಿಂದ ಇದನ್ನು ಗಮನಿಸಿದಾಗ ಪುನೀತ್ ರಾಜಕುಮಾರ್ ಭಾವಚಿತ್ರದಂತೆ ಕಾಣುತ್ತದೆ. ಚೀನಾ ಮತ್ತು ಜಪಾನ್ ದೇಶಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ರೈಸ್ ಪ್ಯಾಡಿ ಆರ್ಟ್ ಚಿತ್ರ ಬಿಡಿಸುವ ಮಾದರಿಯಲ್ಲಿ ಪುನೀತ್ ರಾಜಕುಮಾರ್ ಚಿತ್ರವನ್ನು ತಮ್ಮ ಗದ್ದೆಯಲ್ಲಿ ಮೂಡಿಸಿದ್ದಾರೆ.
ಇದಕ್ಕಾಗಿ ಅವರು ಮೂರು ಲಕ್ಷ ರೂ. ಖರ್ಚು ಮಾಡಿದ್ದಾರೆ. ಮೂರು ತಿಂಗಳ ಭತ್ತದ ಬೆಳೆ ಇದಾಗಿದ್ದು, ಜುಲೈ 17ರಂದು ಬೆಳೆಯಲು ಪ್ರಾರಂಭಿಸಲಾಗಿದೆ. ಯೂಟ್ಯೂಬ್ ಮೂಲಕ ಈ ಕಲೆ ಗಮನಿಸಿದ ಅವರು ಡ್ರೋನ್ ಕ್ಯಾಮರಾಗಳ ಮೂಲಕ ಬೆಳೆಯನ್ನು ವೀಕ್ಷಿಸಿ ಅವಶ್ಯಕತೆ ಇರುವ ಆಯಾ ಬಣ್ಣದ ಭತ್ತ ಕತ್ತರಿಸಿ ಪುನೀತ್ ರಾಜಕುಮಾರ್ ಚಿತ್ರ ಕಾಣುವಂತೆ ಮಾಡಿದ್ದಾರೆ. ಅಲ್ಲದೇ, ಕಾಲುವೆ ನೀರಿನ ಕೊರತೆ ಇದ್ದರೂ, ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡು ಅಭಿಮಾನ ತೋರಿದ್ದಾರೆ.
ಪುನೀತ್ ರಾಜಕುಮಾರ್ ಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಎಂದು ಮೂಡಿ ಬಂದಿದೆ. ಒಂದೊಂದು ಕಣ್ಣು 10 ಅಡಿ ಅಗಲವಿದ್ದು, ಪುನೀತ್ ಮುಖದ ಭಾಗ 140 ಅಡಿ ಉದ್ದ, 40 ಅಡಿ ಅಗಲ ಇದೆ. ಕರ್ನಾಟಕ ರತ್ನ ಎನ್ನುವ ಪದ 10X40 ಅಡಿ ಅಳತೆಯಲ್ಲಿದೆ.
ತಮ್ಮ ಭತ್ತದ ಗದ್ದೆಯಲ್ಲಿ ಪುನೀತ್ ರಾಜ್ ಕುಮಾರ್ ಮೂಡಿಬಂದ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ತೋರಿಸಿದ್ದು, ಅವರು ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.