ಚಿತ್ರದುರ್ಗ: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಬಸವಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮುರುಘಾ ಮಠದ ವತಿಯಿಂದ 2021 ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಪುನೀತ್ ರಾಜಕುಮಾರ್ ಅವರಿಗೆ ನೀಡಲಾಗುವುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪುನೀತ್ ರಾಜಕುಮಾರ್ ಬಾಲನಟ, ನಾಯಕ ನಟನಾಗಿ, ಗಾಯಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸರ್ಕಾರದ ಅನೇಕ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿ ಪ್ರಚಾರಕರಾಗಿ ಸಮಾಜಸೇವೆ ಮಾಡಿದ್ದಾರೆ. ಅವರು ಇತ್ತೀಚೆಗೆ ಅಕಾಲಿಕವಾಗಿ ನಿಧನರಾಗಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ. ಅವರ ಕುಟುಂಬದವರು ದುಃಖ ಸಹಿಸಿಕೊಳ್ಳಲು ಬಸವಾದಿ ಶರಣರ ಆಶೀರ್ವಾದ ಸದಾ ಇರಲಿ ಎಂದು ಹೇಳಿದ್ದಾರೆ.
ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಬಸವ ಜಯಂತಿ ದಿನದಂದು 5 ಲಕ್ಷ ರೂ. ನಗದು ಮತ್ತು ಫಲಕ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನವೆಂಬರ್ 10 ರಂದು ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಾಗಿ ಶರಣರು ಹೇಳಿದ್ದಾರೆ.