ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಗಂಧದ ಗುಡಿ’ ತೆರೆಕಂಡಿದ್ದು, ಹಲವು ಜಿಲ್ಲೆಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.
ದಾವಣಗೆರೆ, ಮೈಸೂರು, ಶಿವಮೊಗ್ಗ, ಚಿತ್ರದುರ್ಗದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಥಿಯೇಟರ್ ಗಳ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
‘ಗಂಧದಗುಡಿ’ ಹಿನ್ನೆಲೆಯಲ್ಲಿ ಥಿಯೇಟರ್ ಗಳ ಮುಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಟೌಟ್ ಗಳು ರಾರಾಜಿಸುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಪ್ರೀಮಿಯರ್ ಶೋ ನಡೆಸಲಾಗಿದೆ.
ಕರ್ನಾಟಕದಲ್ಲಿ 225ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಗಂಧದಗುಡಿ ಬಿಡುಗಡೆಯಾಗಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ, ದುಬೈ ಸೇರಿದಂತೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಫಸ್ಟ್ ಶುರುವಾಗಿದೆ. ‘ಗಂಧದ ಗುಡಿ’ ಬಿಡುಗಡೆ ಹಿನ್ನೆಲೆಯಲ್ಲಿ ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಕಟೌಟ್ ಗಳು ರಾರಾಜಿಸುತ್ತಿವೆ. 75 ಕಟೌಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಅಪ್ಪು ಅಭಿನಯದ ಎಲ್ಲಾ ಸಿನಿಮಾಗಳ ಕಟೌಟ್ ನಿರ್ಮಾಣ ಮಾಡಲಾಗಿದೆ. ನಟ ಪುನೀತ್ ರಾಜಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ನವೆಂಬರ್ 1 ರವರೆಗೂ ಪುನೀತ್ ಕಟೌಟ್ ಗಳು ರಾರಾಜಿಸಲಿವೆ. ಸಮಾಧಿ ವೀಕ್ಷಣೆಗೆ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿಯ ಶಿವ, ಗಂಗಾ, ನಟರಾಜ ಚಿತ್ರಮಂದಿರದಲ್ಲಿ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿದೆ. ‘ಗಂಧದಗುಡಿ’ ಸಂಭ್ರಮಾಚರಣೆ ವೇಳೆ ಚಿತ್ರಮಂದಿರದ ಒಳಗೆ ಹೋಗಲು ಅಭಿಮಾನಿಗಳ ನೂಕುನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಬೆಂಗಳೂರಿನ ಥಿಯೇಟರ್ ಗಳಲ್ಲಿ ಫಸ್ಟ್ ಶೋ ಆರಂಭವಾಗಿದೆ. ಪ್ರಸನ್ನ, ವೀರೇಶ್, ಸಿದ್ದೇಶ್ವರ, ನರ್ತಕಿ, ಕಾವೇರಿ ಸೇರಿದಂತೆ ಹಲವು ಥಿಯೇಟರ್ ಗಳಲ್ಲಿ ಫಸ್ಟ್ ಶೋ ಆರಂಭವಾಗಿದೆ. ಸಿಳ್ಳೆ ಕೇಕೆಯೊಂದಿಗೆ ಅಪ್ಪು ಎಂದು ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ.