ಬೆಂಗಳೂರು: ಹಿರಿಯ ನಟಿ ಪ್ರತಿಮಾದೇವಿ(88) ನಿಧನರಾಗಿದ್ದಾರೆ. ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮಾದೇವಿ ಅವರು ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 60 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
1947 ರಲ್ಲಿ ‘ಕೃಷ್ಣ ಲೀಲಾ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 100 ದಿನ ಪೂರೈಸಿದ ಮೊದಲ ಕನ್ನಡ ಚಿತ್ರ ‘ಜಗನ್ಮೋಹಿನಿ’ಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.
ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ನಟಿಯಾಗಿದ್ದ ಪ್ರತಿಮಾದೇವಿ ಏಪ್ರಿಲ್ 9, 1932 ರಲ್ಲಿ ಜನಿಸಿದ್ದರು. ಅವರ ಮೊದಲ ಹೆಸರು ಮೋಹಿನಿ. ಮಹಾತ್ಮ ಪಿಕ್ಚರ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರ ಪತ್ನಿಯಾಗಿದ್ದಾರೆ.
ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮತ್ತು ನಟಿ, ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಮಕ್ಕಳಾಗಿದ್ದಾರೆ. ‘ರಾಮ ಶಾಮ ಭಾಮ’. ‘ಲಾ ಅಂಡ್ ಆರ್ಡರ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ಮೈಸೂರಿನ ಸರಸ್ವತಿಪುರಂನ ನಿವಾಸದಲ್ಲಿ ನಾಳೆ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನೆರವೇರಲಿದೆ.