ಸಿನಿ ಮಾಂತ್ರಿಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್.’ ಚಿತ್ರದ ‘ನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ನೀಡಲಾಗಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ‘ನಾಟು ನಾಟು’ ಹಾಡಿಗೆ ಪ್ರಶಸ್ತಿ ಬಂದಿದೆ. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ಚಿತ್ರ ಸಾಹಿತಿ ಚಂದ್ರ ಬೋಸ್ ಅವರು ಆಸ್ಕರ್ ಅವಾರ್ಡ್ ಸ್ವೀಕರಿಸಿದ್ದಾರೆ.
ಚಿತ್ರತಂಡಕ್ಕೆ ಪ್ರಧಾನಿ ಮೋದಿ ಅಭಿನಂದಿಸಿದ್ದು, ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವಂಥ ವಿಷಯವಾಗಿದೆ ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ‘ನಾಟು ನಾಟು’ ಹಾಡು ಜನಪ್ರಿಯತೆ ಗಳಿಸಿದೆ. ಇದು ಮುಂದಿನ ವರ್ಷಗಳಲ್ಲಿಯೂ ನೆನಪಿನಲ್ಲಿ ಉಳಿಯುವ ಹಾಡಾಗಿದೆ. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ಚಿತ್ರ ಸಾಹಿತಿ ಚಂದ್ರ ಬೋಸ್ ಅವರಿಗೆ ಅಭಿನಂದನೆ. ಇಡೀ ಚಿತ್ರತಂಡದ ಸಾಧನೆಗೆ ಸಂದ ಗೆಲುವು ಎಂದು ಮೋದಿ ಶ್ಲಾಘಿಸಿದ್ದಾರೆ.
ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ‘ಆರ್.ಆರ್.ಆರ್.’ ಸಿನಿಮಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಡೀ ಭಾರತ ಹೆಮ್ಮೆ ಪಡುವಂತಹ ವಿಷಯ. ತುಂಬಾ ಖುಷಿಯಾಗಿದೆ. ಹಾಡಿನಲ್ಲಿ ನನ್ನ ಮಗ ರಾಮಚರಣ್, ಜೂನಿಯರ್ ಎನ್ಟಿಆರ್ ನೃತ್ಯ ಮಾಡಿದ್ದಾರೆ. ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಕೀರವಾಣಿ ಅವರ ಶ್ರಮ ಇದೆ. ಇಡೀ ಚಿತ್ರತಂಡದ ಶ್ರಮಕ್ಕೆ ಸಂದ ಜಯವಾಗಿದೆ ಎಂದು ಚಿರಂಜೀವಿ ಹೇಳಿದ್ದಾರೆ.
ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕೂಡ ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ‘ನಾಟು ನಾಟು’ ಎಂಬ ಜನಪ್ರಿಯ ಗೀತೆಗಾಗಿ ಅತ್ಯುತ್ತಮ ಮೂಲ ಗೀತೆಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಕ್ಕಾಗಿ ಸಂಯೋಜಕ ಕೀರವಾಣಿ, ಗೀತರಚನೆಕಾರ ಚಂದ್ರಬೋಸ್, ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ‘RRR’ ಚಿತ್ರದ ಸಿಬ್ಬಂದಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.