ಬಾಲಿವುಡ್ ನಟಿ ಹಾಗೂ ರೂಪದರ್ಶಿ ಇಶಿಕಾ ಬೋರಾಹ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಅಸ್ಸಾಮ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಸೂಕ್ತ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜೂನ್ 24 ರಂದು ಇಲ್ಲಿನ ನಾಗಾಂವ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಸರಿಯಾದ ಚಿಕಿತ್ಸೆ ಸಿಗದೆಯೇ ಆತ್ಮಹತ್ಯೆ ಭೀತಿ ಸೃಷ್ಟಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸಿಬ್ಬಂದಿ ಅತಿ ನಿರ್ಲಕ್ಷ್ಯದಿಂದ ಶುಶ್ರೂಷೆ ಮಾಡುತ್ತಾರೆ, ಆರಿದ ಆಹಾರ, ತಣ್ಣೀರು ಕೊಡುತ್ತಾರೆ. ಇಲ್ಲಿ ಸ್ನಾನ ಮಾಡುವುದರಿಂದ ಇನ್ನಷ್ಟು ಆರೋಗ್ಯ ಹದಗೆಡುತ್ತದೆ. ಶುಚಿತ್ವ ಇಲ್ಲ. ಸೊಳ್ಳೆಗಳ ಕಾಟ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಅಲ್ಲಿನ ಅವ್ಯವಸ್ಥೆಗಳ ಕುರಿತು ವಿಡಿಯೋ ಕೂಡ ಪೋಸ್ಟ್ ಮಾಡಿದ್ದು, ಐಸಿಯು ವಾರ್ಡ್ ಎಂದು ಫಲಕ ಇದೆಯಾದರೂ ಗೋದಾಮಿಗಿಂತ ಕಡೆಯಾಗಿದೆ. ಇನ್ನು ಆರಂಭಿಕ ಹಂತದಲ್ಲಿಯೇ ಕೊರೋನಾ ನಿಯಂತ್ರಿಸಬೇಕು. ಬಿಸಿನೀರಿಗೆ ಅರಿಸಿನ, ವಿಟಮಿನ್ ಸಿ, ಸೌತೆಕಾಯಿ, ಟೊಮೊಟೋ, ಚವನ್ ಪ್ರಾಶ್, ಅಶ್ವಗಂಧ ಇತ್ಯಾದಿಗಳನ್ನ ಬಳಸುವ ಮೂಲಕ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬಹುದು. ಆದರೆ, ಇಲ್ಲಿ ಅಂತಹ ಯಾವ ಸವಲತ್ತೂ ಕಾಣುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ, ಖಿನ್ನತೆಗೊಳಗಾಗುತ್ತಿರುವ ನನಗೆ ಆತ್ಮಹತ್ಯೆಯ ಭೀತಿ ಆವರಿಸಿದೆ ಎಂದು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.