ಮಿಸೆಸ್ ಶ್ರೀಲಂಕಾ 2021ರ ಸ್ಪರ್ಧೆಯಲ್ಲಿ ನಡೆದ ಸಣ್ಣ ಗೊಂದಲದಿಂದಾಗಿ ಮಾಡೆಲ್ ಒಬ್ಬರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ವಾಹಿನಿಯಲ್ಲಿ ರವಿವಾರ ಪ್ರಸಾರವಾಗುತ್ತಿದ್ದ ಮಿಸೆಸ್ ಶ್ರೀಲಂಕಾ ಸ್ಪರ್ಧೆಯಲ್ಲಿ ಪುಷ್ಪಿಕಾ ಡಿ ಸಿಲ್ವಾರನ್ನ ವಿಜೇತೆ ಎಂದು ಘೋಷಿಸಲಾಯ್ತು.
ಅಲ್ಲದೇ ಅವರಿಗೆ ಕಿರೀಟವನ್ನೂ ಪ್ರದಾನ ಮಾಡಲಾಯ್ತು. ಆದರೆ ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಮಿಸೆಸ್ ವರ್ಲ್ಡ್ ಸಿಲ್ವಾರಿಂದ ಕಿರೀಟವನ್ನ ಕಸಿದುಕೊಂಡಿದ್ದಾರೆ, ಪುಷ್ಪಿಕಾ ವಿಚ್ಛೆದಿತ ಮಹಿಳೆ ಆಗಿರೋದ್ರಿಂದ ಈ ಪಟ್ಟವನ್ನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಫ್ಯಾಶನ್ ಶೋನ ನಿರ್ಣಾಯಕರು ಡಿ ಸಿಲ್ವಾರನ್ನ ಮಿಸೆಸ್ ಶ್ರೀಲಂಕಾ ವಿಜೇತೆ ಎಂದು ಘೋಷಣೆ ಮಾಡಿದ್ದರು. ಮಿಸೆಸ್ ವರ್ಲ್ಡ್ ಕ್ಯಾರೊಲಿನ್ ಜ್ಯೂರಿ, ಸ್ಪರ್ಧೆಯ ನಿಯಮದ ಪ್ರಕಾರ ಸ್ಪರ್ಧಾಳುಗಳು ಮದುವೆಯಾಗಿರಲೇಬೇಕು ಹಾಗೂ ವಿಚ್ಛೇದನೆ ಪಡೆದಿರಬಾರದು ಎಂದಿದೆ. ಹೀಗಾಗಿ ಈ ಪ್ರಶಸ್ತಿಯನ್ನ ಪುಷ್ಪಿಕಾರಿಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಎರಡನೇ ಸ್ಥಾನ ಪಡೆದ ಮಹಿಳೆಗೆ ಕಿರೀಟ ಸಲ್ಲುತ್ತೆ ಎಂದು ಹೇಳಿದ್ದಾರೆ.
ಪುಷ್ಪಿಕಾರ ತಲೆಯ ಮೇಲಿದ್ದ ಕಿರೀಟವನ್ನ ತೆಗೆದ ಕ್ಯಾರೋಲಿನ್ ಅದನ್ನ ದ್ವಿತೀಯ ಸ್ಥಾನದಲ್ಲಿದ್ದ ಮಹಿಳೆಗೆ ನೀಡಿದ್ದಾರೆ. ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ಪುಷ್ಪಿಕಾ ವೇದಿಕೆಯಿಂದ ಅಳುತ್ತಲೇ ತೆರಳಿದ್ದಾರೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬಳಿಕ ಫ್ಯಾಶನ್ ಶೋನ ಆಯೋಜಕರು ಪುಷ್ಪಿಕಾರ ಬಳಿ ಕ್ಷಮೆಯಾಚಿಸಿದ್ದಾರೆ.
ಇನ್ನು ಈ ಸಂಬಂಧ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಪುಷ್ಪಿಕಾ, ನಾನು ಪತಿಯಿಂದ ದೂರವಿರೋದು ನಿಜ. ಆದರೆ ನಮ್ಮ ನಡುವೆ ವಿಚ್ಛೇದನವಾಗಿಲ್ಲ. ಈ ಘಟನೆ ಬಳಿಕ ನನ್ನ ತಲೆಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ಭೇಟಿ ನೀಡಬೇಕಾಯ್ತು. ನಾನು ಈ ಘಟನೆ ವಿರುದ್ಧ ಕಾನೂನಡಿಯಲ್ಲಿ ಹೋರಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಾನು ಇನ್ನೂ ವಿಚ್ಛೇದನ ಪಡೆಯದ ಮಹಿಳೆ. ನಿಜವಾದ ರಾಣಿ ಮತ್ತೊಂದು ರಾಣಿಯ ಕಿರೀಟವನ್ನ ಕಸಿದುಕೊಳ್ಳೋದಿಲ್ಲ. ಬದಲಾಗಿ ಮತ್ತೊಮ್ಮೆ ಮಹಿಳೆಗೆ ಕಿರೀಟ ಸಿಗಲಿ ಅಂತಾ ಮೌನವಾಗಿಯೇ ಬೆಂಬಲ ನೀಡ್ತಾ ಇರುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಪುಷ್ಪಿಕಾ ವಿಚ್ಛೇದನ ಪಡೆದಿಲ್ಲ ಅನ್ನೋದು ದೃಢವಾದ ಬಳಿಕ ಸ್ಪರ್ಧೆಯ ಆಯೋಜಕರು ಪುಷ್ಪಿಕಾರಿಗೆ ಕಿರೀಟವನ್ನ ಹಿಂದಿರುಗಿಸಿದ್ದಾರೆ.
https://twitter.com/i/status/1379429045251702787