ಕೋವಿಡ್ 19ನಿಂದ ಗುಣಮುಖರಾದ ಬಳಿಕವೂ ನೀವು ಸಂಪೂರ್ಣ ಇದರ ಪಾಶದಿಂದ ಹೊರಬಂದಿದ್ದೀರಿ ಎಂದು ಹೇಳಲಾಗದು. ಕೊರೊನಾವನ್ನ ಗೆದ್ದ ಬಳಿಕವೂ ನಿಮ್ಮ ದೇಹದ ಜೀರ್ಣ ಶಕ್ತಿ ಸುಧಾರಿಸಿರೋದಿಲ್ಲ. ಇದರಿಂದಾಗಿ ನಿಮ್ಮ ದೇಹ ದುರ್ಬಲಗೊಳ್ಳಲಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ನೀವು ಹೆಚ್ಚಚ್ಚು ಅಗಾಧ ಪ್ರಮಾಣದಲ್ಲಿ ಪೋಷಕಾಂಶವನ್ನೊಳಗೊಂಡ ಆಹಾರವನ್ನ ಸೇವಿಸಬೇಕು. ಇತ್ತೀಚಿಗೆ ಕೊರೊನಾದಿಂದ ಚೇತರಿಸಿಕೊಂಡಿರುವ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ತಮ್ಮ ಆಹಾರದ ಕ್ರಮ ಹೇಗಿದೆ ಎಂಬುದನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ತಮ್ಮ ಊಟದ ಫೋಟೋವನ್ನ ಇನ್ಸ್ಟಾದಲ್ಲಿ ಶೇರ್ ಮಾಡಿರುವ ಮಿಲಿಂದ್ ಊಟವನ್ನ ಎಂಜಾಯ್ ಮಾಡಿ ಎಂದು ಶೀರ್ಷಿಕೆ ನೀಡಿದ್ದಾರೆ. ಈ ತಟ್ಟೆಯನ್ನ ನೋಡಿದ ತಕ್ಷಣ ಪಕ್ಕಾ ಮಹಾರಾಷ್ಟ್ರ ಶೈಲಿಯ ಊಟ ಎಂದು ಗುರುತಿಸಬಹುದಾಗಿದೆ. ಈ ಊಟದ ತಟ್ಟೆಯಲ್ಲಿ ಬೀನ್ಸ್, ಸೊಪ್ಪಿನಿಂದ ತಯಾರಾದ ಖಾದ್ಯ, ನುಗ್ಗೆಕಾಯಿ ಸಾಂಬಾರು, ಬಿಳಿ ಅನ್ನ, ಕ್ಯಾರೆಟ್ ಕೋಸಂಬರಿ ಹೀಗೆ ನಾನಾ ಬಗೆಯ ಪೋಷಕಾಂಶಯುಕ್ತ ಖಾದ್ಯ ಇರೋದನ್ನ ನೀವು ಕಾಣಬಹುದಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಹಸಿರು ತರಕಾರಿ ಹಾಗೂ ಸೊಪ್ಪುಗಳಲ್ಲಿ ಪೋಷಕಾಂಶ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇದರ ಜೊತೆಯಲ್ಲಿ ಫೈಬರ್ ಹಾಗೂ ಕಬ್ಬಿಣಾಂಶ ಕೂಡ ಇರೋದ್ರಿಂದ ದೇಹದ ಶಕ್ತಿ ಹೆಚ್ಚಲಿದೆ. ಕ್ಯಾರಟ್ನಲ್ಲಿ ವಿಟಮಿನ್ ಕೆ, ಪೊಟ್ಯಾಷಿಯಂ ಸೇರಿದಂತೆ ಆಂಟಿ ಆಕ್ಸಿಡಂಟ್ ಇದೆ. ಇದರಿಂದ ದೇಹದ ಜೀರ್ಣಶಕ್ತಿ ಸುಧಾರಿಸಲಿದೆ. ಇನ್ನು ನುಗ್ಗೆಕಾಯಿ ಮೂಳೆಯ ಶಕ್ತಿಯನ್ನ ಹೆಚ್ಚಿಸೋದ್ರ ಜೊತೆಗೆ ದೇಹದಲ್ಲಿ ಸಕ್ಕರೆ ಅಂಶವನ್ನೂ ಸರಿದೂಗಿಸಲಿದೆ. ಹೀಗೆ ಪ್ರತಿಯೊಂದು ತರಕಾರಿಯಲ್ಲೂ ದೇಹಕ್ಕೆ ಬೇಕಾದ ಉತ್ತಮ ಅಂಶ ಅಡಗಿದೆ. ಹೀಗಾಗಿ ನೀವು ಸಹ ಕೋವಿಡ್ 19ನಿಂದ ಈಗ ತಾನೆ ಚೇತರಿಕೆ ಕಂಡಿದ್ದಲ್ಲಿ ಪೋಷಕಾಂಶ ಅಗಾಧ ಪ್ರಮಾಣದಲ್ಲಿರುವ ಆಹಾರವನ್ನ ನಿತ್ಯ ಸೇವಿಸಲು ಮರೆಯದಿರಿ.