ಪತ್ನಿ ತನ್ನ ಪತಿಯ ಹುಟ್ಟಿದ ಹಬ್ಬದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಆತನ ಫೋಟೋ ಹಾಕಿ ವಿಷ್ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪತ್ನಿ ತನ್ನ ಪತಿಯ ಬರ್ತಡೆ ದಿನ ಟ್ವೀಟ್ ಮಾಡಿದ ಫೋಟೋ ನೋಡಿ ನೆಟ್ಟಿಗರು ಹೌಹಾರಿದ್ದಾರೆ.
ಖ್ಯಾತ ಫಿಟ್ನೆಸ್ ಎಕ್ಸ್ಪರ್ಟ್, ಮಾಡೆಲ್ ಹಾಗೂ ನಟ ಮಿಲಿಂದ್ ಸೋಮನ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಿದ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಆ ಫೋಟೋ ವೈರಲ್ ಆಗಲು ಹೆಚ್ಚು ಹೊತ್ತು ಬೇಕಾಗಿಲ್ಲ.
ಫಿಟ್ನೆಸ್ ತಜ್ಞರಾದ ಸೋಮನ್ ತಮ್ಮ 55 ನೇ ಹುಟ್ಟು ಹಬ್ಬಕ್ಕಾಗಿ ಪ್ರತಿ ವರ್ಷದಂತೆ ಆರೋಗ್ಯಕರ ಕಾರ್ಯವೊಂದನ್ನು ಮಾಡಿದ್ದಾರೆ. ಅವರು ಬೀಚ್ನಲ್ಲಿ ಓಡಿದ್ದಾರೆ. ಆದರೆ, ಸಾಮಾನ್ಯವಾಗಲ್ಲ ಯಾವುದೇ ಬಟ್ಟೆ ಇಲ್ಲದೇ ಬೆತ್ತಲಾಗಿ ಓಡಿದ್ದಾರೆ.
ಮಿಲಿಂದ್ ಸೋಮನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಾವು ಬೆತ್ತಲೆಯಾಗಿ ಓಡುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ‘ಹ್ಯಾಪಿ ಬರ್ತಡೆ ಟು ಮಿ….-55’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸೋಮನ್ ಬೆತ್ತಲೆ ಫೋಟೋ ತೆಗೆದು ಸುದ್ದಿಯಾಗಿದ್ದು ಇದೇ ಮೊದಲಲ್ಲ. 25 ವರ್ಷದ ಹಿಂದೆ ಅವರ ಬೆತ್ತಲೆ ಫೋಟೋ ಭಾರಿ ವಿವಾದ ಸೃಷ್ಟಿಸಿತ್ತು.
ಅವರು ಬೆತ್ತಲಾಗಿ ಓಡುವ ಫೋಟೋವನ್ನು ಪತ್ನಿ ಅಂಕಿತಾ ಕೋನ್ವಾರ್ ತೆಗೆದಿದ್ದು, ಅವರೂ ಪತಿಯ ಎರಡು ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ನನ್ನ ಹೃದಯ, ನನ್ನ ಸರ್ವಸ್ವವಾದ ವ್ಯಕ್ತಿಗೆ ಹುಟ್ಟು ಹಬ್ಬದ ಶುಭಾಶಯಗಳು. ನನ್ನ ಅಸ್ತಿತ್ವದ ಪ್ರತಿ ಕಣದಲ್ಲೂ ನಿಮ್ಮನ್ನು ಪ್ರೀತಿಸುತ್ತೇನೆ. ನಾನು ನಿಮ್ಮ ಜತೆಗಿನ ಪ್ರತಿ ದಿನವನ್ನೂ ಸಂಭ್ರಮಿಸುತ್ತೇನೆ. 12 ಕಿಮೀ ಬೀಚ್ ಓಟದ ಬಳಿಕ ಟೊಮೆಟೊ ಹಣ್ಣಿನಂತೆ ಕೆಂಪಾಗಿದ್ದೀರಿ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.