ಕೊರೋನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡು ಹೇಳತೀರದ್ದಾಗಿದೆ. ಇವರುಗಳನ್ನು ಮಹಾನಗರಗಳಿಂದ ತಂತಮ್ಮ ಊರುಗಳಿಗೆ ಮರಳಿ ಕಳುಹಿಸಿಕೊಡಲು ಶ್ರಮಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್ ಈಗ ಸಾರ್ವಜನಿಕರ ಪಾಲಿನ ಹೀರೋ ಆಗಿಬಿಟ್ಟಿದ್ದಾರೆ.
ಅದರಲ್ಲೂ ವಲಸೆ ಕಾರ್ಮಿಕರ ಪಾಲಿಗೆ ಸೋನು ಸೂಪರ್ ಹೀರೋ. ಕೇರಳದಲ್ಲಿ ಸಿಲುಕಿದ್ದ 168 ಕಾರ್ಮಿಕರನ್ನು ಏರ್‌ಲಿಫ್ಟ್ ಮಾಡಿಸಿದ ಸೋನು, ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಂದರ್ಭದಲ್ಲಿ ಅವರ ಆಪದ್ಬಾಂಧವರಾಗಿ ನಿಂತಿದ್ದರು.
ಈ ಕಾರ್ಮಿಕರ ಪೈಕಿ 32 ವರ್ಷದ, ಒಡಿಶಾದ ಪ್ರಶಾಂತ್ ಕುಮಾರ್ ಪ್ರದಾನ್ ಎಂಬ ವ್ಯಕ್ತಿಯೂ ಇದ್ದರು. ಇದೀಗ ಪ್ರದಾನ್ ತಮ್ಮ ಊರಿನಲ್ಲಿ ವೆಲ್ಡಿಂಗ್ ಅಂಗಡಿ ಇಟ್ಟುಕೊಂಡಿದ್ದಾರೆ. ಸೋನುರ ಮಾನವೀಯತೆಯಿಂದ ಪ್ರಭಾವಿತರಾದ ಅವರು, ತಮ್ಮ ಈ ಅಂಗಡಿಗೆ ಸೋನು ಸೂದ್ ಹೆಸರನ್ನೇ ಇಟ್ಟಿದ್ದಾರೆ.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ ಪ್ರದಾನ್, ದಿನಕ್ಕೆ 700 ರೂ.ಗಳಷ್ಟು ಸಂಪಾದನೆ ಮಾಡುತ್ತಿದ್ದರು. ಆದರೆ ಕೊರೋನಾ ಲಾಕ್‌ಡೌನ್ ಟೈಮಲ್ಲಿ ಎಲ್ಲಾ ಎಡವಟ್ಟಾದ ನಂತರ ಶ್ರಮಿಕ್ ಸ್ಪೆಷಲ್ ರೈಲಿನಲ್ಲಿ ತಮ್ಮೂರಿಗೆ ಮರಳಲು ಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿ ಪರದಾಡುತ್ತಿದ್ದ ವೇಳೆ ಸೋನು ಅವರ ನೆರವಿಗೆ ಬಂದಿದ್ದಾರೆ. ಹೊಸ ವೆಲ್ಡಿಂಗ್ ಅಂಗಡಿ ತೆರೆದಿರುವುದಕ್ಕೆ ಶುಭ ಹಾರೈಸಿದ ಸೂನು, ಒಡಿಶಾಗೆ ಭೇಟಿ ಕೊಟ್ಟ ವೇಳೆ ಆ ಅಂಗಡಿಯತ್ತ ಬರುವುದಾಗಿ ತಿಳಿಸಿದ್ದಾರೆ.
https://www.instagram.com/p/CC0H0O2AKgd/?utm_source=ig_embed