ಬಾಲಿವುಡ್ ನಟಿ ಮಹಿಮಾ ಚೌಧರಿ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಹಿಮಾ ಈ ಆರೋಪ ಮಾಡಿದ್ದು, ಘಾಯ್ ನನ್ನ ಮೊದಲ ಚಿತ್ರದ ಶೋ ಸ್ಥಗಿತ ಮಾಡಿಸಲು ಕೋರ್ಟ್ ಮೆಟ್ಟಿಲೇರಿದ್ದರು. ಘಾಯ್ ಹಲವು ನಿರ್ಮಾಪಕರಿಗೆ ನನಗೆ ಸಿನೆಮಾದಲ್ಲಿ ಅವಕಾಶ ನೀಡದಂತೆ ಸಂದೇಶ ಕಳಿಸಿದ್ದರು ಎಂದಿದ್ದಾರೆ.
ಮಹಿಮಾ 1997 ರಲ್ಲಿ ಶಾರುಖ್ ಖಾನ್ ಅವರು ನಾಯಕರಾಗಿದ್ದ ‘ಪರ್ದೇಸ್’ ಎಂಬ ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದರು. ಆ ಚಿತ್ರವನ್ನು ಘಾಯ್ ನಿರ್ದೇಶಿಸಿದ್ದರು.
“1998 ಅಥವಾ 99 ರ ಟ್ರೇಡ್ ಗೈಡ್ ಎಂಬ ಮ್ಯಾಗ್ಸಿನ್ ನಲ್ಲಿ ಜಾಹೀರಾತೊಂದನ್ನು ನೀಡಿ, ಮಹಿಮಾ ಅವರಿಗೆ ನಟನೆಗೆ ಅವಕಾಶ ನೀಡುವವರು ತಮ್ಮನ್ನು ಸಂಪರ್ಕಿಸಿ, ಏಕೆಂದರೆ, ನನ್ನ ಜತೆ ಆಕೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿದ್ದಾಳೆ” ಎಂದು ಹೇಳಿಕೆ ನೀಡಿದ್ದರು. ಸಲ್ಮಾನ್, ಸಂಜಯ್ ದತ್, ರಾಜಕುಮಾರ್ ಸಂತೋಷಿ ಹಾಗೂ ಡೇವಿಡ್ ಧವನ್ ಆಗ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಮಹಿಮಾ ತಿಳಿಸಿದ್ದಾರೆ.
1998 ರಲ್ಲಿ ನಾನು ಹಣ ಪಡೆದು ಸಹಿ ಹಾಕಿದ್ದ ‘ಸತ್ಯ’ ಎಂಬ ಚಿತ್ರಕ್ಕೆ ನನ್ನನ್ನು ಕೈಬಿಟ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕನಿಷ್ಠ ಮಾಹಿತಿಯನ್ನೂ ನೀಡದೆ ಊರ್ಮಿಳಾ ಮಾತೋಡ್ಕರ್ ಅವರನ್ನು ಚಿತ್ರಕ್ಕೆ ಸೇರಿಸಿಕೊಂಡಿದ್ದರು. ನನ್ನನ್ನು ಬಿಟ್ಟು ಶೂಟಿಂಗ್ ಪ್ರಾರಂಭವಾಗಿದ್ದನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಳ್ಳಬೇಕಾಯಿತು ಎಂದು ಮಹಿಮಾ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಮಾ ಅವರು ಶೀನಾ ಬೋರಾ ಕೊಲೆ ಪ್ರಕರಣವನ್ನು ಆಧರಿಸಿ ಇರುವ ಅಗ್ನಿದೇವ ಚಟರ್ಜಿ ಅವರ ಕ್ರೈಂ ಥ್ರಿಲ್ಲರ್ ಬಂಗಾಳಿ ಚಿತ್ರ ‘ಡಾರ್ಕ್ ಚಾಕಲೇಟ್’ ನಲ್ಲಿ ಇತ್ತೀಚೆಗೆ ನಟಿಸಿದ್ದಾರೆ.
ಸುಭಾಷ್ ಘಾಯ್ ವಿರುದ್ಧ 2018 ರಲ್ಲಿ ಮಾಡೆಲ್ ಹಾಗೂ ನಟಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ದೂರು ನೀಡಿದ್ದರು. ಘಾಯ್ ತಮ್ಮ ಮನೆಗೆ ಕರೆದು ಒತ್ತಾಯಪೂರ್ವಕವಾಗಿ ಕಿಸ್ ಮಾಡಿದರು, ಅಪ್ಪಿಕೊಂಡರು ಎಂದು ದೂರಿದ್ದರು. ನಂತರ ಮುಂಬೈ ಪೊಲೀಸರು ಘಾಯ್ ಗೆ ಕ್ಲೀನ್ ಚಿಟ್ ನೀಡಿದ್ದರು.