ಲೂಧಿಯಾನ: ಬಾಲಿವುಡ್ ನಟ ಹಾಗೂ ಕಿರುತೆರೆಯ ‘ಮಹಾಭಾರತ’ ಸೇರಿ ಹಲವು ಧಾರಾವಾಹಿಯಲ್ಲಿ ನಟಿಸಿದ್ದ ಸತೀಶ್ ಕೌಲ್(74) ಅವರು ಶನಿವಾರ ಪಂಜಾಬ್ ನ ಲೂಧಿಯಾನಾದಲ್ಲಿ ನಿಧನರಾಗಿದ್ದಾರೆ.
300 ಕ್ಕೂ ಹೆಚ್ಚು ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ ಸತೀಶ್ ಕೌಲ್ ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಸೀರಿಯಲ್ ನಲ್ಲಿ ಇಂದ್ರನ ಪಾತ್ರಧಾರಿಯಾಗಿ ಅಭಿನಯಿಸಿದ್ದರು. 1954 ರಲ್ಲಿ ಕಾಶ್ಮೀರದಲ್ಲಿ ಜನಿಸಿದ ಸತೀಶ್ ಕೌಲ್ 70ರ ದಶಕದ ಆರಂಭದಲ್ಲಿ ವೃತ್ತಿಜೀವನ ಆರಂಭಿಸಿದರು.
‘ರಾಮ್ ಲಖನ್’, ‘ಪ್ಯಾರ್ ತೋಹ್ ಹೋನಾ ಹಿ ಥಾ’, ‘ಆಂಟಿ ನಂಬರ್ ಒನ್’ ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಪಂಜಾಬ್ ನ ‘ಮೌಲ ಜಾಟ್’, ‘ಇಷ್ಕ್ ನಿಮಾನಾ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ‘ಮಹಾಭಾರತ’, ‘ವಿಕ್ರಂ ಬೇತಾಳ್’ ಧಾರಾವಾಹಿಯಲ್ಲಿ ಅವರು ನಟಿಸಿದ್ದಾರೆ.
ಸತೀಶ್ ಕೌಲ್ ನಿಧನಕ್ಕೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸಂತಾಪ ಸೂಚಿಸಿದ್ದು, ಪಂಜಾಬಿ ಸಿನಿಮಾ, ಕಲೆ-ಸಂಸ್ಕೃತಿ ಪ್ರಚಾರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಟನಾ ಶಾಲೆ ನಡೆಸುತ್ತಿದ್ದರು ಕೊರೋನಾ ಲಾಕ್ಡೌನ್ ನಿಂದಾಗಿ ಸತೀಶ್ ಕೌಲ್ ಜೀವನ ನಿರ್ವಹಣೆಗೆ ಅವರಿಗೆ ತೊಂದರೆಯಾಗಿತ್ತು. ಮುಖ್ಯಮಂತ್ರಿ ಅಮರಿಂದರ್ ಸಿಂಗ್ 5 ಲಕ್ಷ ರೂ. ಸಹಾಯಧನ ನೀಡಿದ್ದರು.