ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಸೋಂಕಿನಿಂದ ಉಸಿರಾಟದ ಸಮಸ್ಯೆಯಾಗಿ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಅವರ ಆರೋಗ್ಯ ಗಂಭೀರವಾಗಿದೆ ಎಂಬ ವದಂತಿ, ನಕಲಿ ಸುದ್ದಿಗಳು ಹರಿದಾಡಿವೆ. ಅಲ್ಲದೆ, ಕುರಿಪ್ರತಾಪ್ ಇನ್ನಿಲ್ಲ ಎನ್ನುವ ಸುಳ್ಳು ಸುದ್ದಿ ಕೂಡ ಹರಿದಾಡಿದ್ದು, ಸ್ವತಃ ಕುರಿ ಪ್ರತಾಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇಂತಹ ಸುದ್ದಿಗಳು ಹರಿದಾಡಿದ್ದರಿಂದ ಅವರಿಗೆ ಫೋನ್ ಕರೆಗಳು ಬರಲಾರಂಭಿಸಿವೆ. ಉತ್ತರ ಕೊಟ್ಟು ಸಾಕಾದ ಕುರಿ ಪ್ರತಾಪ್ ಅವರೇ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಆರೋಗ್ಯವಾಗಿದ್ದವರ ಬಗ್ಗೆಯೂ ಹೀಗೆಲ್ಲ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಮನೆಯಲ್ಲಿ ಚೆನ್ನಾಗಿದ್ದೇನೆ. ಆರಾಮವಾಗಿದ್ದೇನೆ. ನನಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದೇನೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದು, ಎಲ್ಲರೂ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದಾರೆ.