ಉಡುಪಿ: ಭೂತಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದು ನಟ ಚೇತನ್ ಹೇಳಿರುವುದಕ್ಕೆ ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಪದ ಕಿಡಿಕಾರಿದ್ದಾರೆ.
ನಟರಿಗೆ ನಟನೆ ಮಾಡಲು ಗೊತ್ತಿದೆ, ನಮಗೆ ನಟಿಸಲು ಗೊತ್ತಿಲ್ಲ. ನಾವು ದೈವಾರಾಧಕರು. ನಮಗೆ ನಟಿಸಲು ಗೊತ್ತಿಲ್ಲ ಎಂದು ಪಂಪದ ಹೇಳಿದ್ದಾರೆ.
ತಲೆಮಾರುಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದಿದ್ದೇವೆ. ಭೂತಾರಾದನೆ ಹಿನ್ನೆಲೆಯ ಬಗ್ಗೆ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಮ್ಮ ನೆಲ, ಕುಲ ಆಚರಣೆ ಬಗ್ಗೆ ಮಾತನಾಡುವ ಜ್ಞಾನ ಅವರಿಗೆ ಇಲ್ಲ. ಸಂಸ್ಕೃತಿಯ ಅವಹೇಳನ ಆದಾಗಲೆಲ್ಲ ಪಂಜುರ್ಲಿ ದೈವದ ಮುಂದೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಉಡುಪಿಯಲ್ಲಿ ಹಿರಿಯ ದೈವಾರಾಧಕ ಕುಮಾರ ಪಂಪದ ಹೇಳಿದ್ದಾರೆ.
‘ಕಾಂತಾರ’ ಚಿತ್ರದಲ್ಲಿನ ದೈವಾರಾಧನೆ, ಆಚರಣೆ, ಹಿಂದೂ ಸಂಪ್ರಾದಯದ ಬಗ್ಗೆ ನಟ ಚೇತನ್ ಪ್ರಸ್ತಾಪಿಸಿದ್ದರ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.