ಆಯುಧಪೂಜೆ ದಿನವಾದ ಅಕ್ಟೋಬರ್ 14 ರಂದು ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ವಿತರಕರು ಸಂಚು ಮಾಡಿದ್ದರಿಂದ ವಿತರಣೆ ಒಂದು ದಿನ ವಿಳಂಬವಾಗಿದೆ. ಸಂಚು ಮಾಡಿದ ವಿತರಕರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ. ಆದರೆ, ಸೂರಪ್ಪ ಬಾಬು ಅವರ ವಿರುದ್ಧವೇ ವಿತರಕ ಖಾಜಾಪೀರ್ ಗಂಭೀರ ಆರೋಪ ಮಾಡಿದ್ದಾರೆ.
ನೀಡಿದ ಹಣವನ್ನು ವಾಪಸ್ ಕೊಡದೆ ಸೂರಪ್ಪಬಾಬು ಕೊಲೆ ಬೆದರಿಕೆ ಹಾಕಿರುವುದಾಗಿ ಚಿತ್ರದುರ್ಗದ ಸಿನಿಮಾ ವಿತರಕ ಖಾಜಾಪೀರ್ ಆರೋಪಿಸಿದ್ದಾರೆ
ಖಾಜಾಪೀರ್ ಅವರು ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ವಿತರಣೆ ಹಕ್ಕು ಪಡೆದಿದ್ದರು. ಸೂರಪ್ಪ ಬಾಬು ಅವರ ರಾಮ್ ಬಾಬು ಫಿಲಮ್ಸ್ ಗೆ 45 ಲಕ್ಷ ರೂಪಾಯಿಯನ್ನು ಆರ್ಟಿಜಿಎಸ್ ಮೂಲಕ ಸಂದಾಯ ಮಾಡಿದ್ದು, 5 ಲಕ್ಷ ರೂಪಾಯಿಯನ್ನು ನೇರವಾಗಿ ನೀಡಿದ್ದರೆನ್ನಲಾಗಿದೆ. ಸಿನಿಮಾ ವಿತರಣೆಗಾಗಿ 1.90 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾದ ಬಿಡುಗಡೆಗೆ ಅವಕಾಶ ಕೊಡದೆ ಮತ್ತು ಹಣವನ್ನು ಕೂಡ ನೀಡದೆ ಸೂರಪ್ಪಬಾಬು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ನಂತರದಲ್ಲಿ ಸಿನಿಮಾ ವಿತರಣೆಯನ್ನು ಜಾಕ್ ಮಂಜು ಅವರಿಗೆ ನೀಡಲಾಗಿದ್ದು, ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದು, ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಖಾಜಾಪೀರ್ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.