ಸ್ಯಾಂಡಲ್ ವುಡ್ ನಲ್ಲಿ ನೈಜ ಘಟನೆಗಳನ್ನು ಆಧರಿಸಿ ಸಾಕಷ್ಟು ಸಿನಿಮಾಗಳು ಥಿಯೇಟರ್ ಅಂಗಳ ಪ್ರವೇಶಿ ಯಶ ಕಂಡಿವೆ. ರಿಯಲಿಸ್ಟಿಕ್ ಸಿನಿಮಾಗಳಿಗೆ ಮೊದಲಿನಿಂದಲೂ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ.
ನೈಜ ಕಥೆ ಅಂದ್ರೆ ಸಿನಿ ಪ್ರೇಕ್ಷಕರಿಗೂ ಒಂದು ರೀತಿಯ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ಚಂದನವನದಲ್ಲಿ ಸದ್ದಿಲ್ಲದೇ ಸಿನಿಮಾವೊಂದು ರೆಡಿಯಾಗಿದೆ. ಆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಟ್ರೈಲರ್ ನೋಡಿದ ವೀಕ್ಷಕರು ಉತ್ತಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದ ಹಾಗೆ, ಆ ಸಿನಿಮಾ ಬೇರ‍್ಯಾವುದು ಅಲ್ಲ, ದೇವರಾಜ್ ಪೂಜಾರಿ ನಿರ್ದೇಶನದ ‘ಕಾರ್ಗಲ್ ನೈಟ್ಸ್..!’ ಹೇಗೆ ಸಿನಿಮಾದ ಹೆಸರು ಆಕರ್ಷಕವಾಗಿ ಇದೆಯೋ.. ಅದೇ ರೀತಿ ಸಿನಿಮಾ ಕೂಡ ಕುತೂಹಲಕಾರಿ ಆಗಿರಲಿದ್ದು, ಹೊಸ ಅನುಭವ ನೀಡಲಿದೆ ಎಂದು ಟ್ರೈಲರ್ ಸಾರಿ ಹೇಳುತ್ತಿದೆ.
ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧರಿಸಿ ನಿರ್ದೇಶಕ ದೇವರಾಜ್ ಪೂಜಾರಿ ಮತ್ತು ತಂಡ ‘ಕಾರ್ಗಲ್ ನೈಟ್ಸ್’ ಚಿತ್ರವನ್ನು ತೆರೆ ಮೇಲೆ ತರುತ್ತಿದೆ.
ಚಿತ್ರದಲ್ಲಿ ಪಶ್ಚಿಮ ಘಟ್ಟದ ಭೂಗತ ಲೋಕದ ಅನಾವರಣಗೊಳ್ಳಲಿದ್ದು, ಹರ್ಶಿಲ್ ಕೌಶಿಕ್ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರಾಗ್ ಯು.ಆರ್.ಎಸ್, ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್, ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ, ಸೂಚನ್ ಶೆಟ್ಟಿ ಚಿತ್ರದಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಇನ್ನು ಚಿತ್ರಕ್ಕೆ ರೋಷನ್ ಲೋಕೇಶ್ ಅವರ ಸಂಕಲನವಿದ್ದು, ಸುರೇಂದ್ರ ನಾಥ್ ಬಿ.ಆರ್. ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಕತೆಯನ್ನು ಸಾಗರ ತಾಲ್ಲೂಕ್ ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ. ಗಂಧದ ಮರಗಳ ಕಳ್ಳಸಾಗಾಣಿಕೆಯ ವಾತಾವರಣವನ್ನು ಮರುಸೃಷ್ಠಿಸುವಲ್ಲಿ ಮಲ್ಲಿಕಾರ್ಜುನ್ ಮತ್ತು ತಂಡ ಯಶಸ್ವಿಯಾಗಿದೆ.
ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರದ ಟ್ರೈಲರ್ A2 music YouTube ಚಾನಲ್ ನಲ್ಲಿ ಬಿಡುಗಡೆಯಾಗಿದೆ.