ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಂತೆ ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತಿರುವ ಖ್ಯಾತ ತಾರೆ ಕಂಗನಾ ರನೌತ್, ಜಾವೇದ್ ಅಖ್ತರ್ ಸೇರಿದಂತೆ ಚಿತ್ರರಂಗದ ಹಲವರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಹೊಸತೇನಲ್ಲ. ಆದರೆ, ಇತ್ತೀಚೆಗೆ ಅದೇ ಹೆಚ್ಚಾಗಿದ್ದು, ಇದಕ್ಕೆ ಹಲವರು ಬಲಿಯಾಗುತ್ತಿದ್ದೇವೆ ಎನ್ನುವಂತೆ ಮಾತನಾಡಿದ್ದಾರೆ.
ಜಾವೇದ್ ಅಖ್ತರ್ ಮನೆಗೊಮ್ಮೆ ಕರೆದು, ರಾಕೇಶ್ ರೋಷನ್ ಕುಟುಂಬದವರು ಬಹಳ ದೊಡ್ಡ ಜನ. ನೀನು ಅವರ ಕ್ಷಮೆ ಕೇಳದಿದ್ದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿನ್ನನ್ನು ಜೈಲಿಗೆ ಕಳುಹಿಸುತ್ತಾರೆ. ಕೊನೆಗೆ ಆತ್ಮಹತ್ಯೆಯೊಂದೇ ನಿನಗುಳಿಯುವ ದಾರಿ ಎಂದಿದ್ದರು. ಆದರೆ, ಅವರು ಹೀಗೆಲ್ಲ ನನಗೆ ಹೇಳಲು ಕಾರಣವೇನು ? ಎಂದು ಯೋಚಿಸುವಾಗ ಒಂದು ಕ್ಷಣ ಹೆದರಿ ಹೋಗಿದ್ದೆ.
ಸುಶಾಂತ್ ಗೂ ಇದೇ ರೀತಿಯ ಕರೆ ಹೋಗಿರಬಹುದೇ ? ಇಂತಹುದೇ ಆಲೋಚನೆಗಳನ್ನು ಆತನ ತಲೆಗೆ ತುಂಬಿರಬಹುದೇ ? ನನಗೂ ಗೊತ್ತಿಲ್ಲ. ಆದರೆ, ಆತ ಕೂಡ ಇಂಥಾ ಸನ್ನಿವೇಶ ಎದುರಿಸುತ್ತಿದ್ದ. ಪ್ರತಿಭೆ ಮತ್ತು ಸ್ವಜನ ಪಕ್ಷಪಾತ ಒಂದೇ ದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ಏಕೆಂದರೆ ಅವರು ನೈಜ ಪ್ರತಿಭೆಯನ್ನು ಬೆಳೆಯಲು ಬಿಡುವುದಿಲ್ಲ ಎಂದು ಹಲವಾರು ಸಂದರ್ಶನಗಳಲ್ಲಿ ಆತ ಹೇಳಿದ್ದನ್ನು ಕೇಳಿದ್ದೇನೆ.
ನನ್ನ ವಿರುದ್ಧ ಇಡೀ ಚಿತ್ರರಂಗ ಗುಂಪು ಕಟ್ಟಿದೆ. ನಾನು ಒಬ್ಬಂಟಿಯಾಗಿದ್ದೇನೆ. ಏನಾಗುತ್ತದೆಯೋ ಎನಿಸಿಬಿಟ್ಟಿದೆ. ಆದದ್ದಾಗಿದೆ. ಇಂತಹ ಜನರನ್ನು ಬಯಲಿಗೆಳೆಯುವವರೆಗೂ ಪ್ರಶ್ನಿಸುತ್ತಲೇ ಇರುತ್ತೇನೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.