ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಫರ್ಧಿಸಲಿರುವ ಕಮಲ್ ಹಾಸನ್‌ರ ಮಕ್ಕಳ್ ನೀಧಿ ಮೈಯ್ಯಮ್ ಪಕ್ಷದ ಚಿಹ್ನೆಯಾಗಿ ’ಬ್ಯಾಟರಿ ಟಾರ್ಚ್’ಅನ್ನು ಮರಳಿ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಕಮಲ್, “ಶೋಷಿತರ ಉದ್ಧಾರಕ್ಕಾಗಿ ಶ್ರಮಿಸಿದ ಮಾರ್ಟಿನ್ ಲೂಥರ್ ಕಿಂಗ್ ಜೂ ಅವರ ಹುಟ್ಟುಹಬ್ಬದಂದು ಈ ಘಟನೆ ಜರುಗಿದೆ. ಎಲ್ಲೆಡೆ ಬೆಳಕು ಪಸರಲಿ” ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿ ವಿಡಿಯೋ ಸಂದೇಶವೊಂದನ್ನು ತಮ್ಮ ಪಕ್ಷದ ಪರವಾಗಿ ಪೋಸ್ಟ್ ಮಾಡಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎಮ್‌ಎನ್‌ಎಮ್ ಪಕ್ಷವು ಟಾರ್ಚ್ ಬ್ಯಾಟರಿ ಚಿಹ್ನೆಯಡಿ ಸ್ಫರ್ಧಿಸಿತ್ತು. ಆಧರೆ ಈ ಬಾರಿ ಈ ಚಿಹ್ನೆಯನ್ನು ಚುನಾವಣಾ ಆಯೋಗವು ಎಂಜಿಆರ್ ಮಕ್ಕಳ್ ಕಚ್ಚಿ ಹೆಸರಿನ ಪುಟ್ಟ ರಾಜಕೀಯ ಪಕ್ಷವೊಂದಕ್ಕೆ ಕೊಡಮಾಡಿತ್ತು.
ಇದರ ಬೆನ್ನಿಗೆ ಚುನಾವಣಾ ಆಯೋಗ ಹಾಗೂ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಮ್‌ಎನ್‌ಎಮ್, ತನ್ನ ಪಕ್ಷದ ಚಿಹ್ನೆಯನ್ನು ಮರಳಿ ಕೊಡುವಂತೆ ಕೋರಿತ್ತು.