ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪ್ರಚಾರದ ಭರಾಟೆ ಕಾವೇರತೊಡಗಿದೆ.
ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥರಾದ ಖ್ಯಾತ ನಟ ಕಮಲ್ ಹಾಸನ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಹೀಗಿರುವಾಗಲೇ ಅವರಿಗೆ ಹಳೆಯ ಗಾಯದ ನೋವು ಕಾಣಿಸಿಕೊಂಡಿದೆ. ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರ ಕಾರ್ಯದಿಂದ ಕಮಲ್ ದೂರ ಉಳಿಯಲಿದ್ದಾರೆ.
ಅನೇಕ ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದುಕೊಂಡಿರಲಿಲ್ಲ. ಹೀಗಾಗಿ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಕಾಲಿನಲ್ಲಿ ನೋವು ಇದ್ದರೂ ಕೂಡ ಪಕ್ಷ ಸಂಘಟನೆ, ಪ್ರಚಾರದಲ್ಲಿ ಭಾಗಿಯಾಗಿದ್ದ ಕಮಲ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಚಾರದ ವೇಳೆ ಜನ ತೋರಿದ ಪ್ರೀತಿ, ಅಭಿಮಾನದಿಂದ ನನಗೆ ನೋವೂ ಕಾಣಿಸಲಿಲ್ಲ ಎಂದು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ, ವಿಶ್ರಾಂತಿ ಬಳಿಕ ಹೊಸ ಉತ್ಸಾಹದೊಂದಿಗೆ ಮತ್ತೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವುದಾಗಿ ಅವರು ಹೇಳಿದ್ದಾರೆ.