ಬೆಳಗಾವಿ: ವಿಚ್ಛೇದನ ಕೋರಿ ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ಜೂನ್ 26 ರಂದು ಬೆಳಗಾವಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೆ. ಕಲ್ಯಾಣ್ ಪತ್ನಿ ಅಶ್ವಿನಿ ಪರ ವಕೀಲ ಸತೀಶ್ ಈ ಕುರಿತು ಮಾಹಿತಿ ನೀಡಿದ್ದು, ಕಲ್ಯಾಣ್ ಅವರು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ವಿಚ್ಛೇದನ ಬೇಕೆಂದು ಅಶ್ವಿನಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಕೆ. ಕಲ್ಯಾಣ್ ಅವರ ವಿರುದ್ಧ ಬೆಳಗಾವಿಯ ಮಾಳಮಾರುತಿ ಠಾಣೆಗೆ ಅಶ್ವಿನಿ ದೂರು ನೀಡಿದ್ದಾರೆ. ಆದರೆ ಕ್ರಮ ಕೈಗೊಳ್ಳದ ಪೊಲೀಸರು, ಕಲ್ಯಾಣ್ ದೂರಿಗೆ ಸ್ಪಂದಿಸಿ ಅಶ್ವಿನಿ ಅವರಿಗೆ ನೆರವಾದವರನ್ನೇ ಠಾಣೆಗೆ ಕರೆ ತಂದಿದ್ದಾರೆ ಎನ್ನಲಾಗಿದೆ.
ಅಶ್ವಿನಿ ಅವರು ಈ ಕುರಿತಾಗಿ ದೂರು ನೀಡಿದ್ದು, ಸಮವಸ್ತ್ರ ಇಲ್ಲದ ಪೊಲೀಸರು ರಾತ್ರಿ 11 ಗಂಟೆ ವೇಳೆಗೆ ಬೆಳಗಾವಿ ತಂದೆ ಮನೆಗೆ ಬಂದು ಅಶ್ವಿನಿ ಅವರೊಂದಿಗೆ ಮಾತನಾಡಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೇ, ಸಹೋದರ ಸಂಬಂಧಿ ಶಿವಾನಂದ ವಾಲಿ ಅವರನ್ನು ಬಂಧಿಸಿದ್ದಾರೆ. ಇದರ ಹಿಂದೆ ಕೆ. ಕಲ್ಯಾಣ್ ಕೈವಾಡವಿದೆ. ಕಲ್ಯಾಣ್ ಅವರ ಹಿಂಸೆ ತಡೆಯಲಾರದೆ ತಂದೆಯ ಮನೆಯಲ್ಲಿದ್ದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಅಣ್ಣನಾದ ಶಿವಾನಂದ ವಾಲಿ ಮತ್ತು ನನ್ನ ತಂದೆ, ತಾಯಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಶಿವಾನಂದ ವಾಲಿ ಅವರನ್ನು ಬಿಡಬೇಕೆಂದು ಅಶ್ವಿನಿ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.