
ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿರುವ ನಟ ನಂದಮೂರಿ ತಾರಕರತ್ನ ಅವರಿಗೆ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಮುಂದುವರೆದಿದೆ.
ನಟರಾದ ಶಿವರಾಜ್ ಕುಮಾರ್, ನಂದಮೂರಿ ಬಾಲಕೃಷ್ಣ, ಜೂನಿಯರ್ ಎನ್.ಟಿ.ಆರ್., ನಂದಮೂರಿ ಕಲ್ಯಾಣ್ ರಾಮ್, ಸಚಿವ ಡಾ.ಕೆ. ಸುಧಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದ್ದಾರೆ.
ಜೂನಿಯರ್ ಎನ್ಟಿಆರ್ ಇಂದು ಸಹೋದರ ಕಲ್ಯಾಣ್ ರಾಮ್ ಮತ್ತು ಸಚಿವ ಸುಧಾಕರ ಅವರೊಂದಿಗೆ ನಾರಾಯಣ ಹೃದಯಾಲಯಕ್ಕೆ ಆಗಮಿಸಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಜೂ.ಎನ್.ಟಿ.ಆರ್., ತಾರಕರತ್ನ ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೇವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಅಭಿಮಾನಿಗಳ ಆಶೀರ್ವಾದ ಇದೆ. ನಮ್ಮ ತಾತ ನಂದಮೂರಿ ರಾಮರಾವ್ ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಾರೆ. ಎಲ್ಲರ ಆಶೀರ್ವಾದದಿಂದ ತಾರಕರತ್ನ ಗುಣಮುಖರಾಗುತ್ತಾರೆ. ಆರೋಗ್ಯ ಸಚಿವ ಸುಧಾಕರ್ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.