ಕೋಲ್ಕತ್ತಾ: ಜಾರ್ಖಂಡ್ ಮೂಲದ ನಟಿ ಮತ್ತು ಯೂಟ್ಯೂಬರ್ ರಿಯಾ ಕುಮಾರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪಶ್ಚಿಮ ಬಂಗಾಳ ಪೊಲೀಸರಿಗೆ ಮೃತರ ಪತಿ ಪ್ರಕಾಶ್ ಕುಮಾರ್ ಮತ್ತು ಅವರ ಕಿರಿಯ ಸಹೋದರ ಸಂದೀಪ್ ಕುಮಾರ್ ಶೂಟಿಂಗ್ ತರಬೇತಿ ಪಡೆದಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ.
ಕುಮಾರ್ ಸಹೋದರರು ರಿಯಾ ಹತ್ಯೆಯಲ್ಲಿ ತಮ್ಮ ಪಾತ್ರದ ಆರೋಪದ ಮೇಲೆ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಬ್ಬರು ಪುತ್ರರ ಬಂಧನದ ಮಾಹಿತಿ ಪಡೆದು ಜಾರ್ಖಂಡ್‌ನಿಂದ ಕೋಲ್ಕತ್ತಾಗೆ ಧಾವಿಸಿದ ಪ್ರಕಾಶ್ ತಂದೆ ಧನೇಶ್ವರ್ ರಾಮ್ ಪೊಲೀಸರಿಗೆ ಈ ವಿಷಯ ಬಹಿರಂಗಪಡಿಸಿದ್ದಾರೆ.
ಧನೇಶ್ವರ್ ರಾಮ್ ಅವರು ತಮ್ಮ ಮೂವರು ಪುತ್ರರೂ ಶೂಟಿಂಗ್ ನಲ್ಲಿ ತರಬೇತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ರಾಂಚಿಯಲ್ಲಿರುವ ಪ್ರಕಾಶ್ ಅವರ ನಿವಾಸದಲ್ಲಿ ಪರವಾನಗಿ ಪಡೆದ ಬಂದೂಕುಗಳಿವೆ ಎಂದು ತಂದೆ ಹೇಳಿದ್ದಾಗಿ ಹೆಸರು ಹೇಳಲು ನಿರಾಕರಿಸಿದ ರಾಜ್ಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆಯ ಯತ್ನದ ವೇಳೆ ರಿಯಾ ಅವರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ರಿಯಾ ಅವರ ಕುಟುಂಬ ಸದಸ್ಯರು ಕುಮಾರ್ ಮತ್ತು ಅವರ ಸಹೋದರರ ವಿರುದ್ಧ ದೂರು ದಾಖಲಿಸಿದ ನಂತರ ಚಲನಚಿತ್ರ ನಿರ್ಮಾಪಕರಾಗಿರುವ ಪ್ರಕಾಶ್ ಅವರನ್ನು ಗುರುವಾರ ಬಂಧಿಸಲಾಯಿತು. ಸಂದೀಪ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.
ಇದೇ ವೇಳೆ ರಿಯಾ ಹತ್ಯೆಗೆ ಬಳಸಿದ್ದ ಬಂದೂಕಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಳೆದ 15 ದಿನಗಳಿಂದ ಪ್ರಕಾಶ್ ಮತ್ತು ಸಂದೀಪ್ ಅವರ ಕರೆ ವಿವರಗಳು ಮತ್ತು ಟವರ್ ಲೊಕೇಶನ್‌ಗಳನ್ನು ಪಡೆಯಲು ರಾಜ್ಯ ಪೊಲೀಸರು ಜಾರ್ಖಂಡ್ ಪೊಲೀಸರ ನೆರವು ಪಡೆದಿದ್ದಾರೆ.
ಪ್ರಕಾಶ್ ಮತ್ತು ಸಂದೀಪ್ ಅವರಲ್ಲದೆ, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂರನೇ ವ್ಯಕ್ತಿ ಪ್ರಕಾಶ್ ಅವರ ಮೊದಲ ಪತ್ನಿ ಶಾರದಾ ದೇವಿ. ಈ ವಿಷಯದಲ್ಲಿ ಆಕೆಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.