ಬೆಂಗಳೂರು: ಕೊರೊನಾ ಸೋಂಕಿತರು ಮೃತಪಟ್ಟ ಸಂದರ್ಭದಲ್ಲಿ ಕೆಲವು ಆಸ್ಪತ್ರೆಗಳು ಮತ್ತು ಆಂಬುಲೆನ್ಸ್ ಸಿಬ್ಬಂದಿ ಅಮಾನವೀಯ ವರ್ತನೆ ತೋರುತ್ತಿರುವ ದೂರುಗಳು ಕೇಳಿಬಂದಿವೆ.
ಇದೇ ಸಂದರ್ಭದಲ್ಲಿ ನಟ ನವರಸನಾಯಕ ಜಗ್ಗೇಶ್ ಅವರು ಆಕ್ರೋಶ ಹೊರಹಾಕಿದ್ದಾರೆ. ಧನದಾಹಿಗಳ ಅಮಾನವೀಯ ವರ್ತನೆಯನ್ನು ಖಂಡಿಸಿರುವ ಜಗ್ಗೇಶ್, ಅಂತವರಿಗೆ ಹೊಡೆಯಬೇಕು ಅನ್ನಿಸಿತು ಎಂದು ಹೇಳಿದ್ದಾರೆ.
ಮೂವರು ಸ್ನೇಹಿತರು, ಇಬ್ಬರು ಬಂಧುಗಳು ಕೊರೊನಾದಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಇನ್ನೂ ಮೂವರು ನರಳುತ್ತಿದ್ದಾರೆ. ಹೋಗಿ ಸಹಾಯ ಮಾಡಲು ಆಗದ ದರಿದ್ರ ಕಾಯಿಲೆ ಇದಾಗಿದೆ ಎಂದು ತಿಳಿಸಿದ್ದಾರೆ.
ಬಂಧುವಿನ ಅಂತ್ಯಸಂಸ್ಕಾರಕ್ಕೆ ಆಂಬುಲೆನ್ಸ್ ಸಿಬ್ಬಂದಿ ಮತ್ತು ಸ್ಮಶಾನದವರು 30,000 ರೂ. ಪೀಕಿದ್ದಾರೆ. ಹೋಗಿ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು. ಇಂಥವರಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕೆಲವರಿಂದಾಗಿ ಮನುಷ್ಯರ ಮೇಲೆ ನಂಬಿಕೆ ಸತ್ತುಹೋಗಿದೆ. ಇಂತಹ ಕ್ರೂರ ವರ್ತನೆಯಿಂದ ನೋವಾಗಿದೆ. ನನಗೆ ಅರಿಯದೆ ಕೆಟ್ಟ ಕೋಪ ಬರುತ್ತಿದೆ ಎಂದು ಹೇಳಿದ್ದಾರೆ.