ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯಲ್ಲಷ್ಟೇ ಪ್ರತಿಭಾವಂತನಲ್ಲ. ವಿಜ್ಞಾನ ವಿಷಯದಲ್ಲೂ ಜ್ಞಾನವಂತ.
ದಿಲ್ಲಿ ಇಂಜಿನಿಯರಿಂಗ್ ಕಾಲೇಜಿನ ಡ್ರಾಪ್ಡ್ ಔಟ್ ವಿದ್ಯಾರ್ಥಿಯಾದ ಸುಶಾಂತ್, ಭೌತ ಹಾಗೂ ಖಗೋಳ ಶಾಸ್ತ್ರ ವಿಷಯದಲ್ಲಿ ಅತ್ಯಾಸಕ್ತ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿಎಚ್ಡಿ ಪದವೀಧರೆ ನಮ್ರತಾ ದತ್ತ ಈ ವಿಷಯ ಬಹಿರಂಗಪಡಿಸಿದ್ದು, ವಿಜ್ಞಾನ ವಿಷಯದಲ್ಲಿ ಸುಶಾಂತ್ ಗೆ ಇದ್ದ ಆಸಕ್ತಿ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ಪ್ಯಾರಿಸ್ ನಲ್ಲಿ ವಿಮಾನಕ್ಕಾಗಿ ಕಾಯುತ್ತಾ ಕುಳಿತಿದ್ದಾಗ ಸುಶಾಂತ್ ಪರಿಚಯ ಆದದ್ದು. ಆಗ ನಾನಿನ್ನೂ ಪಿಎಚ್ಡಿ ವಿದ್ಯಾರ್ಥಿನಿ. ಪಕ್ಕದಲ್ಲಿದ್ದ ಸುಶಾಂತ್ ಒಬ್ಬ ನಟ ಎಂಬುದು ಗೊತ್ತಿರಲಿಲ್ಲ. ಆದರೆ, ಸುಮಾರು 5 ತಾಸು ನಮ್ಮಿಬ್ಬರ ನಡುವೆ ನಡೆದ ಚರ್ಚೆ ಅವರನ್ನು ಭೌತಶಾಸ್ತ್ರಜ್ಞ ಅಥವಾ ವಿದ್ಯಾರ್ಥಿ ಇರಬೇಕು ಎಂದುಕೊಳ್ಳುವಂತೆ ಮಾಡಿತ್ತು. ಡಿಎನ್ಎ, ಎಕ್ಸ್ ರೇ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹಾಗೂ ಪಿಎಚ್ಡಿ ಅಧ್ಯಯನ ನಡೆಸುತ್ತಿರುವ ವಿಷಯದ ಬಗ್ಗೆ ವಿವರಿಸಿದಷ್ಟೂ ತಿಳಿಯುವ ಕುತೂಹಲ ಅವರಲ್ಲಿತ್ತು.
ಚರ್ಚೆ ನಂತರವೇ ಗೊತ್ತಾದದ್ದು ಅವರೊಬ್ಬ ನಟ ಎಂಬುದು. ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಕ್ವಾಂಟಮ್ ಫಿಸಿಕ್ಸ್ ಬಗ್ಗೆ ಸುಶಾಂತ್ ವಿವರಿಸಿದ ಪರಿ ನಿಜಕ್ಕೂ ಅಚ್ಚರಿ. ನಾನೊಬ್ಬ ಮೇಧಾವಿಯೊಂದಿಗೆ ಮಾತನಾಡಿದ್ದೆ ಎಂದು ಟ್ವೀಟ್ ಮಾಡಿದ್ದಾರೆ.