ಹಾಂಕಾಂಗ್: ಕೊರೊನಾ ಮಹಾಮಾರಿ ಹಾಂಕಾಂಗ್ ನಲ್ಲಿ ಕಲಾವಿದರ ಬದುಕನ್ನು ನರಕವಾಗಿಸಿದೆ. ಜನರನ್ನು ನಗಿಸುತ್ತಿದ್ದವರು. ಖುಷಿಗೊಳಿಸುತ್ತಿದ್ದವರು ನಗು ಕಳೆದುಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಯಾವುದೇ ಪ್ರದರ್ಶನಗಳಿಲ್ಲದೇ ಕಲಾವಿದರು ಕಂಗಾಲಾಗಿದ್ದಾರೆ. ಅದನ್ನೇ ಜೀವನಕ್ಕಾಗಿ ನಂಬಿಕೊಂಡಿದ್ದವರಿಗೆ ಊಟಕ್ಕೂ ಗತಿ ಇಲ್ಲದಂತಾಗಿದೆ. ಪ್ರದರ್ಶನಗಳು ಎಂದು ಪ್ರಾರಂಭವಾದಾವು ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.
ಪಶ್ಚಿಮ ಏಷ್ಯಾ ಭಾಗದಲ್ಲೂ ಇದೇ ಪರಿಸ್ಥಿತಿ ಇದೆ. ಅಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದ್ದರೂ ಸುರಕ್ಷತೆಯ ಕಾರಣಕ್ಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಎಂದು ಹೇಳಿ ಥಿಯೇಟರ್ ಗಳು ತೆರೆದುಕೊಂಡಿಲ್ಲ. ಹಾಂಕಾಂಗ್ ನ ನಗರಗಳಲ್ಲಿ ಬೆಲ್ಲಿ ಡಾನ್ಸ್ ಹೆಚ್ಚಾಗಿ ಪ್ರದರ್ಶನಗೊಳ್ಳುವ ಪ್ರಮುಖ ಕಲಾ ಪ್ರಕಾರ. ಅದು ಇತ್ತೀಚಿನ ವರ್ಷಗಳಲ್ಲಿ ಏಷ್ಯಾದ ಹೆಚ್ಚಿನ ರಾಷ್ಟ್ರಗಳಿಗೆ ಎಂದರೆ, ಚೀನಾ ಹಾಗೂ ದಕ್ಷಿಣ ಕೊರಿಯಾಗಳಿಗೂ ವ್ಯಾಪಿಸಿತ್ತು. ಈಗ ಆ ಕಲಾವಿದರ ಪರಿಸ್ಥಿತಿಯೂ ಗಂಭೀರವಾಗಿದೆ.
“ಕಳೆದ 6 ತಿಂಗಳಿಂದ ನನ್ನ ಮನೆಯೇ ಸ್ಟೇಜ್, ಜಿಮ್ ಎಲ್ಲಾ ಆಗಿದೆ. ನಾವು ವೇದಿಕೆಯನ್ನು ಬಹಳ ನೆನಪಿಸಿಕೊಳ್ಳುತ್ತಿದ್ದೇನೆ. ನಾನು ಪ್ರತಿ ಪ್ರದರ್ಶನಕ್ಕೆ 25 ಸಾವಿರ ಹಾಂಕಾಂಗ್ ಡಾಲರ್ ಪಡೆಯುತ್ತಿದ್ದೆ. ಇತ್ತೀಚೆಗೆ ಒಂದೂ ಪ್ರದರ್ಶನ ನೀಡಿಲ್ಲ. ನಾನು ನೀಡುತ್ತಿದ್ದ ನೃತ್ಯ ತರಗತಿಗಳೂ ರದ್ದಾದವು” ಎಂದು ಹಾಂಕಾಂಗ್ ನ 42 ವರ್ಷದ ಬೆಲ್ಲಿ ನೃತ್ಯಗಾರ್ತಿ ಲೋ ಹೇಳುತ್ತಾರೆ.
“ಕಲಾವಿದರಿಗೆ ಸರ್ಕಾರ ಯಾವುದೇ ಬೆಂಬಲ ನೀಡುತ್ತಿಲ್ಲ” ಎಂದು 42 ವರ್ಷದ ಹಿಪ್ ಅಪ್ ಡಾನ್ಸರ್ ರಾಕ್ ಫ್ಯಾಂಗ್ ಬೇಸರ ವ್ಯಕ್ತಪಡಿಸಿದ್ದಾರೆ. “ಒಂದು ಪ್ರದರ್ಶನಕ್ಕೆ 10 ಸಾವಿರ ಡಾಲರ್ ಹಾಂಕಾಂಗ್ ಡಾಲರ್ ಪಡೆಯುತ್ತಿದ್ದೆ. ಶೇ. 80 ರಷ್ಟು ಪ್ರದರ್ಶನಗಳು ರದ್ದಾಗಿವೆ” ಎಂಬುದು ಅವರ ಗೋಳು.