
ಬೆಂಗಳೂರು: ಹಲವು ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಹರ್ಷಿಕಾ ಪೂಣಚ್ಚ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದು, ಅದು ಕೂಡ ನೈಜ ಘಟನೆಯನ್ನಾಧಾರಿಸಿದ ಕಾಲ್ಪನಿಕ ಕಥಾ ಹಂದರವುಳ್ಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಹರ್ಷಿಕಾ ನಿರ್ದೇಶನದ ಚಿತ್ರ ಕೂಡ ಘೋಷಣೆಯಾಗಿದೆ. ‘ಚಿ.ಸೌಜನ್ಯ’ ಚಿತ್ರ ಹರ್ಷಿಕಾ ನಿರ್ದೇಶನದಲ್ಲಿ ಮೂಡಿ ಬರಲಿದ್ದು, ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಶೀರ್ಷಿಕೆ ಪೋಸ್ಟರ್ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ‘ಚಿ.ಸೌಜನ್ಯ’ ಟೈಟಲ್ ಗೆ ‘ಒಂದು ಹೆಣ್ಣಿನ ಕಥೆ’ ಎಂದು ಟ್ಯಾಗ್ ಲೈನ್ ನೀಡಲಾಗಿದೆ.
ಸೌಜನ್ಯ ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ನೈಜ ಘಟನೆಯಾಧಾರಿತ ಕಾಲ್ಪನಿಕ ಕಥೆ ಎಂದು ಹರ್ಷಿಕಾ ಹೇಳಿದ್ದಾರೆ. ಸಿನಿಮಾ ಬಗ್ಗೆ ಕುತೂಹಲದ ಜೊತೆಗೆ ಹರ್ಷಿಕಾ ಹೊಸ ಪ್ರಯತ್ನಕ್ಕೆ ಹಲವರು ಶುಭ ಹಾರೈಸಿದ್ದಾರೆ.