PRK ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಪುನೀತ್ ರಾಜಕುಮಾರ್ ಅಭಿನಯದ ‘ಗಂಧದಗುಡಿ’ ಟೀಸರ್ ಬಿಡುಗಡೆಯಾಗಿದ್ದು, 27 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಟೀಸರ್ ಬಗ್ಗೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.
ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ, ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.
ನಮ್ಮೆಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ. ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಯನ್ನು ಪರಿಚಯಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕತೆಯೊಂದನ್ನು ಹೇಳುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ಅವರಿಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು, ಈ ‘ಗಂಧದ ಗುಡಿ’ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿಯಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.