ಇತ್ತೀಚಿಗಷ್ಟೇ ಬಿಡುಗಡೆಯಾಗಿ ತೀವ್ರ ವಿರೋಧ ಮತ್ತು ಚರ್ಚೆಗೆ ಕಾರಣವಾಗಿರೋ ‘ಪಠಾಣ್’ ಚಿತ್ರದ ಹಾಡಿನಲ್ಲಿರುವ ನಟಿ ದೀಪಿಕಾ ಪಡುಕೋಣೆ ಅವರ ಬಿಕಿನಿ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ಷೇಪವೆತ್ತಿದ್ದಾರೆ.
ಹಾಡಿನಲ್ಲಿನ ಕೆಲವು ದೃಶ್ಯಗಳನ್ನು ಬದಲಿಸಿದಿದ್ದರೆ ಅದರ ಪ್ರದರ್ಶನದ ಬಗ್ಗೆ ಸರ್ಕಾರವು ಏನು ಮಾಡಬೇಕೆಂದು ಪರಿಗಣಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಡಿನಲ್ಲಿ ಕಂಡುಬರುವ ಬಿಕಿನಿಯು ಅತ್ಯಂತ ಆಕ್ಷೇಪಾರ್ಹ. ಹಾಡನ್ನು ಕಲುಷಿತ ಮನಸ್ಥಿತಿ ಯಿಂದ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಗರಂ ಆಗಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ(ಜೆಎನ್‌ಯು) ಪ್ರಕರಣದಲ್ಲಿ ನೋಡಿದಂತೆ ಶ್ರೀಮತಿ ದೀಪಿಕಾ ಪಡುಕೋಣೆ ತುಕ್ಡೆ ತುಕ್ಡೆ ಗ್ಯಾಂಗ್ ನ ಬೆಂಬಲಿಗರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಕ್ತಾರರಾದ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಹಾಡಿನ ದೃಶ್ಯಗಳು ಮತ್ತು ದೀಪಿಕಾ ಪಡುಕೋಣೆಯವರ ವೇಷಭೂಷಣಗಳನ್ನು ಸರಿಪಡಿಸಲು ನಾನು ವಿನಂತಿಸುತ್ತೇನೆ. ಇಲ್ಲದಿದ್ದರೆ ಈ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಲು ಅನುಮತಿಸಬೇಕೇ ಅಥವಾ ಬೇಡವೇ ಎಂಬುದು ಪರಿಗಣಿಸಬೇಕಾದ ಪ್ರಶ್ನೆಯಾಗಿದೆ ಎಂದು ಮಿಶ್ರಾ ಇಂದೋರ್‌ನ ಮೊವ್ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರುವ ‘ಪಠಾಣ್’ ಚಿತ್ರದ ಬೇಶ್ರಾಮ್ ರಂಗ್ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ವಸ್ತ್ರಗಳ ಬಗ್ಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.