ಬೆಂಗಳೂರು: ಸಾಕ್ಷ್ಯ ಚಿತ್ರದ ಕಾಪಿ ರೈಟ್ಸ್ ಉಲ್ಲಂಘನೆ ಮತ್ತು ವಂಚನೆ ಆರೋಪದಡಿ ಚಿತ್ರ ನಿರ್ದೇಶಕ ಜೇಕಬ್ ವರ್ಗೀಸ್ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್ ಪ್ರತಿನಿಧಿ ಇಲ್ವಿಸ್ ಜೋಸೆಫ್ ಅವರು ದೂರು ನೀಡಿದ್ದು, ನ್ಯಾಯಾಲಯದ ನಿರ್ದೇಶನದಂತೆ ಜೇಕಬ್ ವರ್ಗೀಸ್, ದಿನೇಶ್ ರಾಜಕುಮಾರ್, ಮ್ಯಾಥ್ಯೂ ವರ್ಗೀಸ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು ಸ್ಕೂಲ್ ಫೌಂಡೇಶನ್ ವತಿಯಿಂದ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಇಬ್ಬರು ಕ್ರೀಡಾಪಟುಗಳ ಜೀವನ ಕ್ರಮದ ಕುರಿತಾಗಿ ‘ರನ್ನಿಂಗ್ ಪಾಸಿಟಿವ್’ ಎಂಬ ಸಾಕ್ಷ್ಯ ಚಿತ್ರ ಮಾಡಲು ನಿರ್ಧರಿಸಿ ನಿರ್ದೇಶಕ ಜೇಕಬ್ ವರ್ಗೀಸ್ ಅವರೊಂದಿಗೆ 2020ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇಬ್ಬರು ಕ್ರೀಡಾಪಟುಗಳು ನಾಲ್ಕು ವರ್ಷಗಳ ಕಾಲ ಭಾಗವಹಿಸಿದ್ದ ಎಲ್ಲಾ ಕ್ರೀಡಾಕೂಟಗಳ ಚಿತ್ರೀಕರಣದ ಕಾಪಿ ರೈಟ್ಸ್ ಹಾಗೂ ವೆಚ್ಚ ಭರಿಸುವುದಾಗಿ ತಿಳಿಸಲಾಗಿತ್ತು. ಚಿತ್ರೀಕರಣದ ಖರ್ಚು ವೆಚ್ಚವನ್ನು ಸಂಸ್ಥೆಯಿಂದ ಭರಿಸಲಾಗಿದೆ. ಚಿತ್ರೀಕರಣದ ನಂತರ ಕಾಪಿರೈಟ್ಸ್ ವರ್ಗಾಯಿಸಿಲ್ಲ ಎಂದು ಹೇಳಲಾಗಿದೆ.