ಅತ್ಯಾಚಾರ ಆರೋಪದ ಅಡಿಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರ್ ಹೆಗ್ಡೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದೆ.
30 ವರ್ಷದ ಬ್ಯೂಟಿಷಿಯನ್ ಈ ದೂರನ್ನ ದಾಖಲಿಸಿದ್ದು ಕುಮಾರ್ ಮದುವೆಯಾಗುತ್ತೇನೆಂದು ನಂಬಿಸಿ ನನ್ನ ಮೇಲೆ ಅತ್ಯಾಚಾರಗೈದಿದ್ದಾನೆ ಎಂದು ಆರೋಪಿಸಿದ್ದಾಳೆ.
ದೂರಿನಲ್ಲಿ, ಕುಮಾರ್ ಹೆಗ್ಡೆ ಕಳೆದ ವರ್ಷ ಜೂನ್ನಲ್ಲಿ ಆಕೆಯನ್ನ ಮದುವೆಯಾಗೋದಾಗಿ ನಂಬಿಸಿದ್ದರಂತೆ. ಮದುವೆಯಾಗುತ್ತೇವೆ ಎಂದು ನಂಬಿಕೆಯಿಂದಲೇ ತಾನು ಕುಮಾರ್ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ವರದಿಗಳ ಪ್ರಕಾರ ಇವರಿಬ್ಬರು ಕಳೆದ 8 ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯವಿದ್ದರು ಎನ್ನಲಾಗಿದೆ. ದೂರಿನಲ್ಲಿ ಆಕೆ ತನ್ನ ಒಪ್ಪಿಗೆ ಇಲ್ಲದೆಯೇ ಕುಮಾರ್ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೇ ತನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಆತ ನನ್ನಿಂದ 50 ಸಾವಿರ ರೂಪಾಯಿ ತೆಗೆದುಕೊಂಡಿದ್ದ. ಅದಾದ ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದಾಳೆ.
ಈ ರೀತಿ ಪ್ರಕರಣ ದಾಖಲಾಗಿರೋದು ಹೌದು ಎಂದು ಮುಂಬೈ ಪೊಲೀಸ್ ಠಾಣೆ ವಕ್ತಾರ ಸ್ಪಷ್ಟನೆ ನೀಡಿದ್ದು ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.