ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
89 ವರ್ಷದ ಭಗವಾನ್ ಅವರು ಎಸ್.ಕೆ. ಭಗವಾನ್ ಎಂದೇ ಪರಿಚಿತರು. ಅವರ ಪೂರ್ಣ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್. ನಿರ್ದೇಶಕ ದೊರೈರಾಜ್ ಜೊತೆಗೂಡಿ ದೊರೈ ಭಗವಾನ್ ಹೆಸರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ನಿರ್ಮಾಪಕರಾಗಿ, ನಟರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ದೊರೈ- ಭಗವಾನ್ ಜೋಡಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದೆ. ಪ್ರಮುಖವಾಗಿ ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಗಿರಿಕನ್ಯೆ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಯಾರಿವನು?’ ಮೊದಲಾದ ಚಿತ್ರಗಳನ್ನು ಅವರು ನಿರ್ದೇಸಿದ್ದಾರೆ. ಅವರ ನಿರ್ದೇಶನದ 30 ಚಿತ್ರಗಳಲ್ಲಿ ವರನಟ ಡಾ. ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಸಿನಿಮಾ ರಂಗದಲ್ಲಿ 65 ವರ್ಷದ ಸುಧೀರ್ಘ ಅನುಭವ ಹೊಂದಿರುವ ಭಗವಾನ್ ಅವರು ದೊರೈರಾಜು ನಿಧನದ ನಂತರ ನಿರ್ದೇಶನದಿಂದ ದೂರ ಉಳಿದಿದ್ದಾರೆ.