ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದ ಅನಭಿಷಿಕ್ತ ರಾಣಿಯಾಗಿದ್ದ ನಟಿ ಶ್ರೀದೇವಿ ಸಾವನ್ನಪ್ಪಿ ಇಂದಿಗೆ ಮೂರು ವರ್ಷ. 2018 ರ ಫೆಬ್ರವರಿ 24 ರಂದು ದುಬೈನ ಐಷಾರಾಮಿ ಹೋಟೆಲ್ ನಲ್ಲಿ ಶ್ರೀದೇವಿ ಅಕಾಲಿಕವಾಗಿ ಸಾವಿಗೀಡಾಗಿದ್ದರು. ಶ್ರೀದೇವಿ ಕುರಿತ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.
ಶ್ರೀದೇವಿ ನಿಜಕ್ಕೂ ಚಿತ್ರರಂಗದ ಮೆಗಾ ಸ್ಟಾರ್. ಯಾವ ಪಾತ್ರಕ್ಕೇ ಆದ್ರೂ ಜೀವ ತುಂಬಬಲ್ಲ ಅದ್ಭುತ ನಟಿ. ಸಿಕ್ಕ ಸಿನೆಮಾಗಳಲ್ಲೆಲ್ಲ ಶ್ರೀದೇವಿ ನಟಿಸುತ್ತಿರಲಿಲ್ಲ. ತಮಗೆ ಸರಿ ಎನಿಸಿದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ರು. ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಸಂಭಾವನೆ, ಸಹ ನಟರಿಗಿಂತ್ಲೂ ಹೆಚ್ಚಾಗಿತ್ತು.
ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಶ್ರೀದೇವಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಆದ್ರೆ ಚಿತ್ರರಂಗದ ಬಗ್ಗೆ ಆಕೆಗಿದ್ದ ಒಲವು ಎಂದಿಗೂ ಕುಗ್ಗಲಿಲ್ಲ. ಶ್ರೀದೇವಿಯದ್ದು ನಿಜಕ್ಕೂ ಅದ್ಭುತ ವ್ಯಕ್ತಿತ್ವ ಎನ್ನುತ್ತಾರೆ ಅವರೊಂದಿಗೆ ಅಭಿನಯಸಿದ ನಟ, ನಟಿಯರು.
ಶಾರುಖ್ ಅಭಿನಯದ ʼಝೀರೋʼ ಚಿತ್ರದಲ್ಲಿ ಶ್ರೀದೇವಿ ಅತಿಥಿ ಪಾತ್ರ ಮಾಡಿದ್ದರು. ಇದು ಅವರ ಜೀವನದ ಕೊಟ್ಟ ಕೊನೆಯ ಚಿತ್ರವಾಗಿದೆ. ‘ಮಾಮ್’ ಶ್ರೀದೇವಿ ನಟನೆಯ 300ನೇ ಚಿತ್ರವಾಗಿತ್ತು. ಶ್ರೀದೇವಿ ಅವರ ಬಗೆಗಿನ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
1969 ರಲ್ಲಿ ಥನೈವನ್ ಎಂಬ ಚಿತ್ರದ ಮೂಲಕ 4ನೇ ವರ್ಷದಲ್ಲಿಯೇ ಬಾಲನಟಿಯಾಗಿ ಅಭಿನಯಿಸಿದ್ದರು ಶ್ರೀದೇವಿ. 1975ರಲ್ಲಿ ಜೂಲಿ ಚಿತ್ರದಲ್ಲಿಯೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. 1979ರಲ್ಲಿ ʼಸೋಲಾ ಸಾವನ್ʼ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು.
ಶ್ರೀದೇವಿಯ ನಿಜವಾದ ಹೆಸರು ಶ್ರೀ ಅಮ್ಮಯ್ಯಂಗಾರ್ ಅಯ್ಯಪ್ಪನ್. ಚಿತ್ರರಂಗ ಪ್ರವೇಶಿಸಿದ ಬಳಿಕ ತಮ್ಮ ಹೆಸರನ್ನು ಶ್ರೀದೇವಿ ಎಂದು ಬದಲಾಯಿಸಿಕೊಂಡಿದ್ದರು.
1980-90ರ ದಶಕದಲ್ಲಿ ಶ್ರೀದೇವಿ ಹಾಗೂ ಅನಿಲ್ ಕಪೂರ್ ಜೋಡಿ ಸೂಪರ್ ಹಿಟ್ ಆಗಿತ್ತು. ಇಬ್ಬರೂ 13 ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ, ಬಹುತೇಕ ಎಲ್ಲವೂ ಸೂಪರ್ ಹಿಟ್ ಆಗಿವೆ. ಮಿಸ್ಟರ್ ಇಂಡಿಯಾ, ಲಮ್ಹೆ, ಲಾಡ್ಲಾ, ಜುದಾಯಿ ಸೇರಿದಂತೆ ಹಲವು ಚಿತ್ರಗಳು ಯಶಸ್ಸು ಕಂಡಿದ್ದವು. ನಟ ಜೀತೇಂದ್ರ ಜೊತೆಗೆ ಶ್ರೀದೇವಿ 16 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
1990ರಲ್ಲಿ ಶ್ರೀದೇವಿಗೆ ಹಾಲಿವುಡ್ ನಿಂದ ಆಫರ್ ಬಂದಿತ್ತು. ಸ್ಟೀವನ್ ಸ್ಪೀಲ್ ಬರ್ಗ್ ರ ಜುರಾಸಿಕ್ ಪಾರ್ಕ್ ಚಿತ್ರದಲ್ಲಿ ನಟಿಸುವಂತೆ ಆಫರ್ ನೀಡಲಾಗಿತ್ತು. ಆದ್ರೆ ಶ್ರೀದೇವಿ ಅದನ್ನು ತಿರಸ್ಕರಿಸಿದ್ದರು.
ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಶ್ರೀದೇವಿಗೆ ಚೆನ್ನಾಗಿ ಹಿಂದಿ ಮಾತನಾಡಲು ಬರುತ್ತಿರಲಿಲ್ಲ. ಹಾಗಾಗಿ ಶ್ರೀದೇವಿ ನಟನೆಯ ಹಲವು ಚಿತ್ರಗಳಲ್ಲಿ ನಾಝ್ ಮತ್ತು ರೇಖಾ ವಾಯ್ಸ್ ಡಬ್ ಮಾಡಿದ್ದರು.
2002ರಲ್ಲಿ ಶ್ರೀದೇವಿ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಬೇಕಿತ್ತು. ಶಕ್ತಿ ಚಿತ್ರದಲ್ಲಿ ನಟಿಸಲು ಆಕೆಗೆ ಆಫರ್ ಬಂದಿತ್ತು. ಆದ್ರೆ ಶ್ರೀದೇವಿ ಗರ್ಭಿಣಿಯಾಗಿದ್ದರಿಂದ ಆ ಚಿತ್ರದಲ್ಲಿ ನಟಿಸಿರಲಿಲ್ಲ. ಶ್ರೀದೇವಿ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ನಟಿಸಿದ್ದರು.
ರಜನಿಕಾಂತ್ ಅಮ್ಮನಾಗಿ ಶ್ರೀದೇವಿ ನಟಿಸಿದ್ದಾರೆ. 1976ರಲ್ಲಿ ಬಿಡುಗಡೆಯಾದ ತಮಿಳಿನ ಮೂಂದ್ರ ಮುಡೈಚು ಚಿತ್ರದಲ್ಲಿ 13 ವರ್ಷದ ಶ್ರೀದೇವಿ, ರಜನಿಕಾಂತ್ ರ ಮಲತಾಯಿಯಾಗಿ ನಟಿಸಿದ್ದರು.
ಶ್ರೀದೇವಿ ಸಿನೆಮಾಗಳ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ವಹಿಸುತ್ತಿದ್ದರು. 1992ರಲ್ಲಿ ಬಿಡುಗಡೆಯಾದ ಬೇಟಾ, ಡರ್ ಹೀಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗುವ ಅವಕಾಶ ಬಂದಿದ್ದರೂ ಅದನ್ನು ಒಪ್ಪಿರಲಿಲ್ಲ. ಹೊಸತನವಿಲ್ಲದ ಪಾತ್ರಗಳನ್ನಂತೂ ಒಪ್ಪುತ್ತಲೇ ಇರಲಿಲ್ಲ.
2013ರಲ್ಲಿ ನಟಿ ಶ್ರೀದೇವಿಗೆ ಪದ್ಮಶ್ರೀ ಪುರಸ್ಕಾರ ದೊರೆತಿದೆ. ಇದು ಭಾರತ ಸರ್ಕಾರ ನೀಡುವ ನಾಲ್ಕನೇ ಅತ್ಯುನ್ನತ ಗೌರವವಾಗಿದೆ.
ಶ್ರೀದೇವಿ ಅತ್ಯಂತ ವೃತ್ತಿಪರತೆ ಹೊಂದಿದ್ದರು. ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ರು. 1990ರಲ್ಲಿ ಲಮ್ಹೆ ಚಿತ್ರದ ಶೂಟಿಂಗ್ ವೇಳೆ ಶ್ರೀದೇವಿ ಅವರ ತಂದೆ ಮೃತಪಟ್ಟಿದ್ದರು. ತಂದೆಯ ಅಂತ್ಯಸಂಸ್ಕಾರದ ಬಳಿಕ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಮತ್ತೆ ಲಂಡನ್ ಗೆ ತೆರಳಿದ್ದರು ಶ್ರೀದೇವಿ.