ಬಿಗ್ ಬಾಸ್ ಸೀಸನ್ 14 ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ನಟಿ ರಾಖಿ ಸಾವಂತ್ ಇಷ್ಟು ದಿನ ತಮ್ಮ ಪತಿಯ ಮಾಹಿತಿಯನ್ನು ಮುಚ್ಚಿಟ್ಟಿದ್ದರು. ಆದರೆ, ಈಗ ಅವರ ಪತಿ ಯುನೈಟೆಡ್ ಕಿಂಗ್ಡಮ್ ಮೂಲದ ಉದ್ಯಮಿ ರಿತೇಶ್ ಸ್ವತಃ ಹೇಳಿಕೆ ನೀಡಿದ್ದು, ತಾನು ಮಾಧ್ಯಮಗಳ ಮುಂದೆ ಬರಲು ಸಿದ್ಧನಿದ್ದೇನೆ ಎಂದಿದ್ದಾರೆ.
ರಾಖಿ ತಮ್ಮ ಪತಿಯ ಹೆಸರು ಬಿಟ್ಟು ಮತ್ಯಾವ ಮಾಹಿತಿಯನ್ನೂ ಹೇಳಿರಲಿಲ್ಲ. ಆದರೆ ಬಿಗ್ ಬಾಸ್ ನಲ್ಲಿ “ಮೇ ಹೂನಾ ಆ್ಯಕ್ಟರ್” ಟಾಸ್ಕ್ ನ ವಿಚಾರ ಮಾಧ್ಯಮಗಳಲ್ಲಿ ಹೆಡ್ ಲೈನ್ ಆದ ನಂತರ ಸ್ವತಃ ರಿತೇಶ್ ಆಂಗ್ಲ ಮಾಧ್ಯಮವೊಂದಕ್ಕೆ ದೂರವಾಣಿ ಸಂದರ್ಶನ ನೀಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ದೀಪಕ್ ಕಲಾಲ್ ವಿಷಯದಂತೆ ಇದೂ ಒಂದು ವಿವಾದದ ವಸ್ತುವಾಗಬಹುದು ಎಂಬ ಕಾರಣಕ್ಕೆ ನಾನು ಇಷ್ಟು ದಿನ ತೆರೆ ಮರೆಯಲ್ಲಿದ್ದೆ. ಈಗ ಬಹಿರಂಗವಾಗಿ ಬರಲು ಕಾಲ ಕೂಡಿ ಬಂದಿದೆ. ಇದು ನನ್ನ ತಪ್ಪು. ನನ್ನ ಸ್ವಾರ್ಥದ ಕಾರಣದಿಂದ, ಏನಾದರೂ ತೊಂದರೆಯಾಗಬಹುದು ಎಂಬ ಕಾರಣದಿಂದ ನನ್ನ ಗುರುತು ಮುಚ್ಚಿಟ್ಟಿದ್ದೆ. ನಾನು ಈಗ ಎಲ್ಲರಿಗೂ ಹೇಳ ಬಯಸುತ್ತೇನೆ ಎಂದು ರಾಖಿ ಸಾವಂತ್ ಪತಿ ರಿತೇಶ್ ಹೇಳಿದ್ದಾರೆ.