ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥರಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ದಿಲೀಪ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾದ ಡಾ. ನಿತಿನ್ ಗೋಖಲೆ ಮತ್ತು ಡಾ. ಜಲೀಲ್ ಪಾರ್ಕರ್ ಅವರ ಆರೈಕೆಯಲ್ಲಿ ದಿಲೀಪ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗಿದೆ. 98 ವರ್ಷದ ದಿಲೀಪ್ ಕುಮಾರ್ ಕೆಲವು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ನಿಯಮಿತ ಆರೋಗ್ಯ ತಪಾಸಣೆ ಬಳಿಕ ಬಿಡುಗಡೆಯಾಗಿದ್ದರು.
ಇಂದು ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಕೊಹಿನೂರ್’, ‘ಮೊಘಲ್-ಎ-ಅಜಮ್’, ‘ಶಕ್ತಿ’, ‘ರಾಮ್ ಔರ್ ಶ್ಯಾಮ್’ ಮೊದಲಾದ ಕ್ಲಾಸಿಕ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ದಿಲೀಪ್ ಕುಮಾರ್ ಹೆಸರುವಾಸಿಯಾಗಿದ್ದಾರೆ.