ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು ತಮ್ಮ 34ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್ನ ಈ ಕ್ವೀನ್ ತಮ್ಮ ನಟನಾ ಚಾಕಚಕ್ಯತೆ ಮೂಲಕ ಅಭಿಮಾನಿಗಳ ಮನಗೆದ್ದಿರೋದು ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದ ಪೋಸ್ಟ್ ಮೂಲಕವೂ ಸದಾ ಸುದ್ದಿಯಲ್ಲಿ ಇರ್ತಾರೆ. ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡೋ ಈ ಬಾಲಿವುಡ್ ಪವರ್ಹೌಸ್ ಬಗ್ಗೆ ನೀವಿನ್ನೂ ತಿಳಿಯದ ಕೆಲ ಮಾಹಿತಿ ಇಲ್ಲಿದೆ ನೋಡಿ.
ಕಂಗನಾ ರಣಾವತ್ ಹಿಮಾಚಲ ಪ್ರದೇಶ ಭಾಂಬ್ಲಾದಲ್ಲಿ ಜನಿಸಿದ್ರು. ಬಾಲ್ಯದಲ್ಲಿ ವೈದ್ಯೆಯಾಗಬೇಕು ಎಂದು ಕನಸು ಕಂಡಿದ್ದ ಈಕೆಯನ್ನ ಜೀವನ ಕರೆತಂದಿದ್ದು ನಟನಾ ಲೋಕಕ್ಕೆ. ರಜಪೂತ ಕುಟುಂಬದಲ್ಲಿ ಜನಿಸಿದ ಕಂಗನಾರ ತಂದೆ ಅಮರ್ ದೀಪ್ ರಣಾವತ್. ಅಮರ್ ದೀಪ್ ವೃತ್ತಿಯಲ್ಲಿ ಉದ್ಯಮಿಯಾಗಿದ್ರೆ ತಾಯಿ ಆಶಾ ರಣಾವತ್ ಶಿಕ್ಷಕಿಯಾಗಿದ್ದರು. ಕಂಗನಾರ ಪೂರ್ತಿ ಹೆಸರು ಕಂಗನಾ ಅಮರದೀಪ್ ರಣಾವತ್ ಹಾಗೂ ಕಂಗನಾರ ನಿಕ್ನೇಮ್ ಅರ್ಷದ್ ಆಗಿದೆ.
ಕಂಗನಾರ ಹಿರಿಯ ಸಹೋದರಿ ರಂಗೋಲಿ ಹಾಗೂ ಕಿರಿಯ ಸಹೋದರ ಅಕ್ಷತ್. ಕುತೂಹಲಕಾರಿ ಅಂಶ ಅಂದ್ರೆ ಕಂಗನಾರ ಹಿರಿಯ ಸಹೋದರಿ ರಂಗೋಲಿ ಇವರ ಮ್ಯಾನೇಜರ್ ಕೂಡ ಹೌದು. ಕಂಗನಾರ ವೃತ್ತಿ ಸಂಬಂಧಿ ಎಲ್ಲಾ ಮಾಹಿತಿಗಳನ್ನ ರಂಗೋಲಿಯೇ ನೋಡಿಕೊಳ್ತಾರೆ.
ರಂಗೋಲಿ ಚಾಂಡೇಲ್ ಆಸಿಡ್ ದಾಳಿಗೆ ಒಳಗಾದವರಾಗಿದ್ದಾರೆ. ಕಂಗನಾ ನಟನಾ ಲೋಕಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದ ವೇಳೆ ಈಕೆಯ ಕುಟುಂಬಸ್ಥರು ಮಾತನಾಡೋದನ್ನೇ ನಿಲ್ಲಿಸಿದ್ದರಂತೆ. ಕಂಗನಾರ ತಂದೆ ಕೂಡ ಪುತ್ರಿಯ ಈ ನಿರ್ಧಾರದಿಂದ ತೃಪ್ತಿ ಹೊಂದಿರಲಿಲ್ಲ.
16 ವರ್ಷ ವಯಸ್ಸಿಗೆ ಕಂಗನಾ ದೆಹಲಿಗೆ ಆಗಮಿಸಿದ್ರು ಹಾಗೂ ಮಾಡೆಲಿಂಗ್ ವೃತ್ತಿ ಜೀವನವನ್ನ ಆರಂಭಿಸಿದ್ರು. ಅಸ್ಮಿತಾ ಥಿಯೇಟರ್ ಗ್ರೂಪ್ನ್ನು ಸೇರುವ ಸಲುವಾಗಿ ಕಂಗನಾ ಮಾಡೆಲಿಂಗ್ ಲೋಕಕ್ಕೆ ಗುಡ್ ಬೈ ಹೇಳಿದ್ರು. ಅರವಿಂದ ಗೌರ್ ನಿರ್ದೇಶನದ ಸಾಕಷ್ಟು ನಾಟಕಗಳಲ್ಲಿ ಕಂಗನಾ ನಟಿಸಿದ್ದಾರೆ.
ಕಥಕ್ ನೃತ್ಯಗಾರ್ತಿಯಾಗಿರುವ ಕಂಗನಾಗೆ ಬ್ರೇಕ್ ತಂದು ಕೊಟ್ಟ ಸಿನಿಮಾ 2014ರಲ್ಲಿ ತೆರೆಕಂಡ ʼಕ್ವೀನ್ʼ ಚಿತ್ರ. ಈ ಫಿಲಂಗಾಗಿ ಕಂಗನಾ ನ್ಯಾಷನಲ್ ಅವಾರ್ಡ್ ಕೂಡ ಪಡೆದಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಂದರೆ ಕೇವಲ 22 ವರ್ಷ ವಯಸ್ಸಿಗೇ ಕಂಗನಾ ʼಫ್ಯಾಷನ್ʼ ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದರು. 2015ರಲ್ಲಿ ʼತನು ವೆಡ್ಸ್ ಮನುʼ ಸಿನಿಮಾದಲ್ಲಿ ನಟನೆಗಾಗಿಯೂ ಇವರು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇದು ಮಾತ್ರವಲ್ಲದೇ ಇನ್ನು ಅನೇಕ ರಾಷ್ಟ್ರೀಯ ಪ್ರಶಸ್ತಿಗಳು ಕಂಗನಾಳ ಮುಡಿಗೇರಿದೆ.
2020ರಲ್ಲಿ ಕೇಂದ್ರ ಸರ್ಕಾರ ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಯನ್ನ ನೀಡಿ ಕಂಗನಾರನ್ನ ಸನ್ಮಾನಿಸಿದೆ. ಇನ್ನು ಕಂಗನಾರ ಕಾಲೇಜು ದಿನಗಳ ಬಗ್ಗೆ ಮಾತನಾಡೋದು ಅಂದ್ರೆ, 12ನೇ ತರಗತಿಯಲ್ಲಿ ಕಂಗನಾ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಂತೆ. ಈ ಸಮಯದಲ್ಲೇ ಕಂಗನಾಗೆ ತಾನು ಸೈನ್ಸ್ ಓದಲು ಅಲ್ಲ ಬದಲಾಗಿ ಇನ್ಯಾವುದೋ ಬೇರೆಯ ವೇದಿಕೆಯಲ್ಲಿ ಸಾಧನೆ ಮಾಡಬೇಕು ಅನ್ನೋದು ತಲೆಗೆ ಬಂದಿತ್ತಂತೆ. ಕಂಗನಾ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ಗೆ ಸಿದ್ಧತೆ ನಡೆಸಿದ್ದರು. ಬಾಲ್ಯದಿಂದಲೂ ವೈದ್ಯೆಯಾಗಬೇಕು ಎಂದುಕೊಂಡಿದ್ದ ನಟಿ ಎಂದಿಗೂ ವೈದ್ಯಕೀಯ ಪರೀಕ್ಷೆಯನ್ನ ಎದುರಿಸಿರಲಿಲ್ಲ.