ಕೊರೊನಾ ಎರಡನೆ ಅಲೆ ದೇಶದ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ದಾಳಿಯಿಂದ ಭರ್ಜರಿ ಹೊಡೆತವನ್ನೇ ತಿಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದರೆ ಅವರ ಚಿಕಿತ್ಸೆಗೆ ಬೇಕಾದ ಆಕ್ಸಿಜನ್ ಹಾಗೂ ಬೆಡ್ ಸೌಲಭ್ಯದ ಕೊರತೆ ಭಾರೀ ದೊಡ್ಡ ಪ್ರಮಾಣದಲ್ಲಿ ಹಿನ್ನಡೆಯನ್ನ ತಂದೊಡ್ಡಿದೆ.
ಈ ಎಲ್ಲಾ ಸಂಕಷ್ಟಗಳ ನಡುವೆಯೂ ಸೆಲೆಬ್ರಿಟಿಗಳು, ಜನಸಾಮಾನ್ಯರೆನ್ನದೇ ಅನೇಕರು ಕೋವಿಡ್ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ. ಹಾಗೂ ಅನೇಕ ಸಂಘ ಸಂಸ್ಥೆಗಳು ಅಭಿಯಾನಗಳ ಮೂಲಕ ನಿರಾಶ್ರಿತರ ಹಾಗೂ ಕೊರೊನಾ ಸೋಂಕಿತರಿಗೆ ಕೈಲಾದ ಸಹಾಯ ಮಾಡುತ್ತಿವೆ.
ಇದೇ ರೀತಿ ದೆಹಲಿಯ ಕೆಲ ಸಂಗೀತಗಾರರು ವರ್ಚುವಲ್ ಕನ್ಸರ್ಟ್ಗಳ ಮೂಲಕ ಹಣವನ್ನ ಸಂಗ್ರಹಿಸಿ ಆ ಮೊತ್ತವನ್ನ ಕೋವಿಡ್ ವಿರುದ್ಧದ ಹೋರಾಟಕ್ಕೆ ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಕಾಮಾಕ್ಷಿ ಖನ್ನಾ ಎಂಬ ಗಾಯಕಿ ವರ್ಚುವಲ್ ಕನ್ಸರ್ಟ್ ಮೂಲಕ 37 ಲಕ್ಷ ರೂಪಾಯಿ ಹಣವನ್ನ ಸಂಗ್ರಹಿಸಿ ಇದನ್ನ ಹೇಮ್ಕಂಟ್ ಫೌಂಡೇಶನ್ಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಅದೇ ರೀತಿ ಬ್ರೀದ್ ದಿಸ್ ಏರ್ ( ಈ ಗಾಳಿಯನ್ನ ಉಸಿರಾಡಿ) ಎಂಬ ಹೊಸ ಯೋಜನೆಯ ಮೂಲಕ ಹರ್ಲೀನ್ ಸಿಂಗ್ ಹಾಗೂ ಸಿದ್ಧಾಂತ್ ಕೋರ್ಡಿಯಾ ಕೂಡ ಇಲ್ಲಿಯವರೆಗೆ 14 ಸಾವಿರ ಲೀಟರ್ ಆಕ್ಸಿಜನ್ ಪೂರೈಸಿದ್ದಾರೆ. ಈ ಸಂಗೀತಕಾರರು ಒಟ್ಟು 20 ಸಾವಿರ ಲೀಟರ್ ಆಕ್ಸಿಜನ್ನ್ನು ದೇಣಿಗೆ ರೂಪದಲ್ಲಿ ನೀಡುವ ಇರಾದೆ ಹೊಂದಿದ್ದಾರೆ.