
ಬೆಂಗಳೂರು: ನಟ ದರ್ಶನ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ದರ್ಶನ್ ಕೂಡ ಅಭಿಮಾನಿಗಳನ್ನು ಸೆಲೆಬ್ರಿಟಿಗಳೆಂದು ಕರೆಯುತ್ತಾರೆ. ಬಿಡುವಿನ ವೇಳೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಂದಿಗೆ ಬೆರೆಯುತ್ತಾರೆ. ಫೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಾರೆ.
ಹೀಗೆ ವಿಶೇಷಚೇತನ ಅಭಿಮಾನಿಯೊಬ್ಬರನ್ನು ದರ್ಶನ್ ಭೇಟಿ ಮಾಡಿ ರಸ್ತೆಯಲ್ಲಿಯೇ ಕುಳಿತು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಬೆಂಗಳೂರಿನಲ್ಲಿ ದರ್ಶನ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದುದನ್ನು ಗಮನಿಸಿದ ವಿಶೇಷಚೇತನ ಆಟೋ ಚಾಲಕ ಅವರನ್ನು ಹಿಂಬಾಲಿಸಿದ್ದಾರೆ. ಇದನ್ನು ಗಮನಿಸಿದ ದರ್ಶನ್ ಕಾರು ನಿಲ್ಲಿಸಿ ತಮ್ಮ ಅಭಿಮಾನಿಯಾಗಿರುವ ವಿಶೇಷಚೇತನ ಆಟೋ ಚಾಲಕನನ್ನು ರಸ್ತೆಯಲ್ಲಿ ಕುಳಿತು ಮಾತನಾಡಿಸಿದ್ದಾರೆ.
ತಾವೇ ಕೆಳಗೆ ಕುಳಿತುಕೊಂಡ ದರ್ಶನ್ ಆತ್ಮೀಯವಾಗಿ ಅಭಿಮಾನಿಯನ್ನು ಮಾತನಾಡಿಸಿದ್ದು, ಅವರೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಂಡು ಸರಳತೆ ಮೆರೆದಿದ್ದಾರೆ. ನೆಚ್ಚಿನ ನಾಯಕನನ್ನು ಕಂಡ ಅಭಿಮಾನಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.