ಮಧುರೈನಿಂದ ತಿರುಚಿಗೆ ಪ್ರಯಾಣ ಮಾಡಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಖರ್ಚಾಗಬಹುದು..? ನೀವು ಎಷ್ಟೇ ಖರ್ಚು ಮಾಡುತ್ತೇನೆ ಅಂದರೂ ನಿಮ್ಮ ಪ್ರಯಾಣದ ಮೊತ್ತ ನಾಲ್ಕಂಕಿ ದಾಟೋಕೆ ಸಾಧ್ಯವಾಗಲಿಕ್ಕಿಲ್ಲ. ಆದರೆ ನಟ ಹಾಗೂ ಮಕ್ಕಲ್ ನಿಧಿ ಮಾಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮಧುರೈನಿಂದ ತಿರುಚಿಗೆ ಪ್ರಯಾಣ ಮಾಡಲು ವ್ಯಯಿಸಿದ ಹಣ ಬರೋಬ್ಬರಿ 1.5 ಲಕ್ಷ ರೂಪಾಯಿ..!
ಕಮಲ್ಹಾಸನ್ ಮಧ್ಯಾಹ್ನ ಚೆನ್ನೈನಿಂದ ತಿರುಚಿಗೆ ಆಗಮಿಸಬೇಕಿತ್ತು. ಆದರೆ ತಿರುಚಿ ವಿಮಾನ ನಿಲ್ದಾಣದಲ್ಲಿ ರನ್ ವೇ ಕಾರ್ಪೆಟ್ ಕೆಲಸದಿಂದಾಗಿ ಅವರ ವಿಮಾನವನ್ನ ಮಧುರೈಗೆ ತಿರುಗಿಸಲಾಯ್ತು. ಮಧುರೈನಿಂದ ತಿರುಚಿಗೆ ಖಾಸಗಿ ಚಾಪರ್ನಲ್ಲಿ ಪ್ರಯಾಣ ಮಾಡಿದ ಕಮಲ್ ಹಾಸನ್ ಇದಕ್ಕಾಗಿ ಒಂದೂವರೆ ಲಕ್ಷ ರೂಪಾಯಿ ವ್ಯಯಿಸಿದ್ದಾರಂತೆ.
ತಮಿಳುನಾಡು ರಾಜಕೀಯ ನಾಯಕರು ಚಾರ್ಟೆಡ್ ವಿಮಾನ ಹಾಗೂ ಖಾಸಗಿ ಚಾಪರ್ಗಳನ್ನ ಬಳಕೆ ಮಾಡೋದು ತುಂಬಾನೇ ಕಡಿಮೆ. ಹೆಚ್ಚಿನ ನಾಯಕರು ರಸ್ತೆ ಅಲ್ಲವೇ ವಾಣಿಜ್ಯ ಹಾರಾಟದ ಮೂಲಕವೇ ಪ್ರಯಾಣ ಮಾಡ್ತಾರೆ. ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಮಾತ್ರ ಅವರ ಆರೋಗ್ಯ ಸ್ಥಿತಿಯಿಂದಾಗಿ ದೂರದ ಸ್ಥಳಕ್ಕೆ ಚಾಪರ್ ಬಳಕೆ ಮಾಡುತ್ತಿದ್ದರು.
ರನ್ ವೇ ಸಮಸ್ಯೆಯಿಂದಾಗಿ ಕಮಲ್ ಹಾಸನ್ ತಮ್ಮ ಕಾರ್ಯಕ್ರಮವನ್ನ ರದ್ದು ಮಾಡಬಹುದಾಗಿತ್ತು. ಆದರೆ ಇಷ್ಟೆಲ್ಲ ಹಣ ವ್ಯಯಿಸಿ ಪರ್ಯಾಯ ಮಾರ್ಗ ಹುಡುಕಿದ ಕಮಲ್ಹಾಸನ್ ಕಾರ್ಯಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.