500 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಸೂಪರ್ ಹೀರೋ ಸಿನಿಮಾ ಮಾಡುವ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಒಲಿಸಿಕೊಳ್ಳಲು ಸುಕೇಶ್ ಬಯಸಿದ್ದ ಎನ್ನುವ ಸಂಗತಿ ಬಯಲಾಗಿದೆ.
ಸುಕೇಶ್ ಚಂದ್ರಶೇಖರ್ ಅವರೊಂದಿಗಿನ ಹಿಂದಿನ ಸಂಬಂಧದ ಆರೋಪದ ಕಾರಣದಿಂದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುದ್ದಿಯಲ್ಲಿದ್ದಾರೆ. ಜಾಕ್ವೆಲಿನ್ ಒಲಿಸಿಕೊಳ್ಳಲು ಸುಕೇಶ್ ಎಲ್ಲ ಪ್ರಯತ್ನ ಮಾಡಿದ್ದಾನೆ. ಕಾರ್ ಗಳು, ಕುದುರೆ ಮತ್ತು ಇತರ ಉಡುಗೊರೆಗಳು ಸೇರಿದಂತೆ ಐಷಾರಾಮಿ ವಸ್ತುಗಳನ್ನೇ ಕೊಟ್ಟಿದ್ದಾನೆ. ಸುಕೇಶ್ ಜಾಕ್ವೆಲಿನ್ ಅನ್ನು ಮೆಚ್ಚಿಸಲು ಇತರ ತಂತ್ರಗಳ ಮೊರೆ ಹೋಗಿದ್ದ. ಜಾಕ್ವೆಲಿನ್ ಗಾಗಿ ಸರಣಿ ಚಲನಚಿತ್ರಗಳನ್ನು ನಿರ್ಮಿಸುವ ಭರವಸೆ ನೀಡಿದ್ದ ಎಂದು ಹೇಳಲಾಗಿದೆ.
ಜಾಕ್ವೆಲಿನ್ ಗಾಗಿ 500 ಕೋಟಿ ರೂಪಾಯಿಗಳ ಮೂರು ಭಾಗಗಳ ಮಹಿಳಾ ಸೂಪರ್ ಹೀರೋ ಸಿನಿಮಾ ನಿರ್ಮಿಸುವ ಯೋಜನೆಯನ್ನು ಸಹ ಸುಕೇಶ್ ಕೈಗೊಂಡಿದ್ದ.
ವರದಿಯ ಪ್ರಕಾರ, ಹಾಲಿವುಡ್ ವಿಎಫ್ಎಕ್ಸ್ ಕಲಾವಿದರನ್ನು ಒಳಗೊಂಡಿರುವ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪ್ರಾಜೆಕ್ಟ್ ನಿರ್ಮಿಸುವುದಾಗಿ ಸುಕೇಶ್ ಭರವಸೆ ನೀಡಿದ್ದ ಮತ್ತು ಅದನ್ನು ಜಾಗತಿಕ ಮಟ್ಟದಲ್ಲಿ ಚಿತ್ರೀಕರಿಸಲಾಗುವುದು ಎಂದೂ ತಿಳಿಸಿದ್ದ.
ಸುಕೇಶ್ ಅವರು ಜಾಕ್ವೆಲಿನ್ಗೆ ಹಾಲಿವುಡ್ ನಟಿ ಏಂಜಲೀನಾ ಜೋಲಿಯನ್ನು ಹೋಲುತ್ತಾರೆ ಮತ್ತು ಅವರ ಸುತ್ತ ನಿರ್ಮಿಸಲಾದ ಸೂಪರ್ ಹೀರೋ ಸರಣಿಗೆ ಅರ್ಹರು ಎಂದು ಕೂಡ ಹೇಳಿದ್ದ.
ಪ್ರಸ್ತುತ ಸುಕೇಶ್ ಪ್ರಕರಣದ ತನಿಖೆ ಮುಂದುವರೆದಿದೆ. ಇತ್ತೀಚೆಗೆ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ಎದುರಿಸಿದ್ದಾರೆ. ಅವರು ಜೂನ್ 2020 ಮತ್ತು ಮೇ 2021 ರ ನಡುವೆ ಮಾಜಿ ರಾನ್ ಬಾಕ್ಸಿ ಮಾಲೀಕ ಶಿವಿಂದರ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ 200 ಕೋಟಿ ರೂ. ಪಡೆದಿದ್ದರು. ಸುಕೇಶ್ ಅವರು ಫೆಬ್ರವರಿ 2021 ರಿಂದ ಆಗಸ್ಟ್ 7, 2021 ರಂದು ಬಂಧಿಸುವವರೆಗೂ ಜಾಕ್ವೆಲಿನ್ ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು ಎಂದು ಇಡಿ ಆರೋಪಿಸಿದೆ.