ಬೆಂಗಳೂರು: ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬದಲಿಸಿದ್ದು, ಚಿತ್ರಮಂದಿರದಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.
ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸಚಿವ ಕೆ. ಸುಧಾಕರ್ ಸೂಚನೆ ನೀಡಿದ್ದಾರೆನ್ನಲಾಗಿದೆ. ನಿನ್ನೆ ರಾತ್ರಿ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ ಕೊರೊನಾ ಎರಡನೇ ಕಾರಣ ಫೆಬ್ರವರಿ 28 ರವರೆಗೆ ಚಿತ್ರಮಂದಿರಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವಂತೆ ಸೂಚಿಸಿತ್ತು.
ಭಾರತ ಸರ್ಕಾರದ ಮಾಹಿತಿ ಹಾಗೂ ಪ್ರಸರಣ ಮಂತ್ರಾಲಯ ಮಾರ್ಗಸೂಚಿಯಂತೆ ಸಿನಿಮಾ ಹಾಲ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದ್ದರೂ ರಾಜ್ಯದಲ್ಲಿ ಕೊರೋನಾ ಪ್ರಸ್ತುತ ಪರಿಸ್ಥಿತಿಯನ್ನು ಮತ್ತು ಎರಡನೇ ಅಲೆ ಸಾಧ್ಯತೆಯನ್ನು ಪರಿಗಣಿಸಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಫೆಬ್ರವರಿ 28 ರ ವರೆಗೆ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿತ್ತು.
ರಾಜ್ಯದಲ್ಲಿ ಶೇಕಡ 50 ರಷ್ಟು ಮಾತ್ರ ಅವಕಾಶ ನೀಡಿದ್ದಕ್ಕೆ ಕನ್ನಡ ಚಿತ್ರರಂಗದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಸರ್ಕಾರ ನಿರ್ಧಾರ ಬದಲಿಸಿ ಸಿನಿಮಾ ಹಾಲ್ ನಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.