ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಬಾಲಿವುಡ್ ಹಾಡು ಸದ್ದು ಮಾಡುತ್ತಿದೆ. ಡೆಮೊಕ್ರಟಿಕ್ ಪಕ್ಷದ ಅಧ್ಯಕ್ಷೀಯ ಪದವಿ ಸ್ಪರ್ಧಿ ಜೋ ಬಿಡೆನ್ ಅವರ ಬೆಂಬಲಿಗರು ಅಮೀರ್ ಖಾನ್ ಅವರ ಪ್ರಸಿದ್ಧ ಲಗಾನ್ ಚಿತ್ರದ ಹಾಡು “ಚಲೆ ಚಲೋ” ವನ್ನು ರಿಮೇಕ್ ಮಾಡಿ ಬಳಸಿಕೊಂಡಿದ್ದಾರೆ.
ಭಾರತೀಯ ಗ್ರಾಮೀಣ ಪ್ರತಿಭೆಗಳು ಬ್ರಿಟಿಷ್ ಕ್ರಿಕೆಟ್ ತಂಡದ ವಿರುದ್ಧ ಹೋರಾಡುವ ದೇಶಭಕ್ತಿಯ ಸನ್ನಿವೇಶ ಹಾಡಿನಲ್ಲಿದೆ. ಈಗ “ಚಲೇ ಚಲೋ ಬಿಡೆನ್ ಕೋ ವೋಟ್ ದೋ ಬಿಡೆನ್ ಕಿ ಜೀತ್ ಹೋ ಉನಕಿ ಹಾರ್ ಹಾನ್” ಎಂದು ಲಿರಿಕ್ಸ್ ಬದಲಿಸಲಾಗಿದೆ.
ನವೆಂಬರ್ 3 ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರೆಟಿಕ್ ಪಕ್ಷದಿಂದ ಜೊ ಬಿಡೆನ್ ಅಧ್ಯಕ್ಷ ಸ್ಥಾನಕ್ಕೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇನ್ನು ರಿಪಬ್ಲಿಕನ್ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿದ್ದಾರೆ.