alex Certify ಲೆಜೆಂಡರಿ ನಟ ದಿಲೀಪ್ ಕುಮಾರ್ ವಿಧಿವಶ: ಹಣ್ಣಿನ ವ್ಯಾಪಾರಿ ಯೂಸೂಫ್ ಖಾನ್ ನಟನಾಗಿದ್ದೆ ರೋಚಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೆಜೆಂಡರಿ ನಟ ದಿಲೀಪ್ ಕುಮಾರ್ ವಿಧಿವಶ: ಹಣ್ಣಿನ ವ್ಯಾಪಾರಿ ಯೂಸೂಫ್ ಖಾನ್ ನಟನಾಗಿದ್ದೆ ರೋಚಕ

ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ನಟ ದಿಲೀಪ್ ಕುಮಾರ್ ನಿಧನರಾಗಿದ್ದಾರೆ. ಭಾರತ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರಾಗಿದ್ದ ದಿಲೀಪ್ ಕುಮಾರ್ ರಾಜ್ಯಸಭೆ ಸದಸ್ಯರೂ ಆಗಿದ್ದರು.

ದಿಲೀಪ್ ಕುಮಾರ್ ಜನ್ಮನಾಮ ಮೊಹಮ್ಮದ್ ಯೂಸೂಫ್ ಖಾನ್. ಈಗಿನ ಪಾಕಿಸ್ತಾನದಲ್ಲಿರುವ ಪೇಶಾವರದ ಕಿಸ್ಸಾ ಖ್ವಾನಿ ಬಜಾರ್ ಮೊಹಲ್ಲಾದ ಖದಾದಾದದಲ್ಲಿ 1922 ರ ಡಿಸೆಂಬರ್ 11 ರಂದು ಜನಿಸಿದರು.

ಆರು ಮಂದಿ ಗಂಡುಮಕ್ಕಳು ಮತ್ತು ಆರು ಮಂದಿ ಹೆಣ್ಣುಮಕ್ಕಳ ದೊಡ್ಡ ಕುಟುಂಬ ದಿಲೀಪ್ ಕುಮಾರ್ ಅವರದ್ದು. ಅವರ ತಂದೆಯ ಲಾಲಾ ಗುಲಾಮ್ ಸರ್ದಾರ್ ಹಣ್ಣಿನ ಬೆಳೆಗಾರರು, ವ್ಯಾಪಾರಿಯಾಗಿದ್ದರು. ಪೇಶಾವರ ಮತ್ತು ಮಹಾರಾಷ್ಟ್ರದ ನಾಸಿಕ್ ಸಮೀಪ ದೇವಲಾಲಿ ಬಳಿ ಅವರ ಹಣ್ಣಿನ ತೋಟಗಳು ಇದ್ದವು. 1930ರ ದಶಕದಲ್ಲಿ ದಿಲೀಪ್ ಕುಮಾರ್ ಕುಟುಂಬ ಮುಂಬೈಗೆ ಬಂದು ನೆಲೆಸಿತು.

ಯುವಕರಾಗಿದ್ದ ಯೂಸೂಫ್ ಖಾನ್ ಪುಣೆಯಲ್ಲಿ ಕ್ಯಾಂಟೀನ್ ಉದ್ಯಮ ನಡೆಸುತ್ತಿದ್ದರು. ಜೊತೆಗೆ ಒಣಹಣ್ಣುಗಳ ವ್ಯಾಪಾರ ಆರಂಭಿಸಿದ್ದರು. ಆಗಿನ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಬಾಂಬೆ ಟಾಕೀಸ್ ಮಾಲೀಕ ಹಿಮಾಂಶು ರಾಯ್ ಅವರ ಪತ್ನಿ ದೇವಿಕಾರಾಣಿ ಯೂಸೂಫ್ ಖಾನ್ ಚಿತ್ರರಂಗ ಪ್ರವೇಶಿಸಲು ಸಹಾಯ ಮಾಡಿದರು. 1944 ರಲ್ಲಿ ‘ಜ್ವಾರ್ ಭಾಟಾ’ ಚಿತ್ರದ ನಾಯಕನ ಪಾತ್ರಕ್ಕೆ ದಿಲೀಪ್ ಕುಮಾರ್ ಎಂದು ಹೆಸರಿಟ್ಟಿದ್ದು, ಅದೇ ಮುಂದುವರೆಯಿತು. 1947 ರಲ್ಲಿ ‘ಜುಗ್ನು’ ಚಿತ್ರದ ಬಳಿಕ ಖ್ಯಾತಿ ಪಡೆದರು.

ದಿಲೀಪ್ ಕುಮಾರ್ ನಟಿಸಿದ ‘ಅಂದಾಜ್’, ‘ದೀದಾರ್’, ‘ಆನ್’, ‘ಅಮರ್’, ‘ಆಜಾದ್’, ‘ದೇವದಾಸ್’, ‘ಮುಸಾಫಿರ್’, ‘ಮಧುಮತಿ’, ‘ಮುಘಲ್ ಎ ಆಜಂ’ ಮೊದಲಾದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿವೆ. ಹೆಚ್ಚಿನ ಸಿನಿಮಾಗಳಲ್ಲಿನ ಪಾತ್ರಗಳ ಕಾರಣಕ್ಕೆ ಅವರು ದುರಂತ ನಾಯಕ ಎಂಬ ಖ್ಯಾತಿಯನ್ನು ಪಡೆದರು. ‘ಮುಘಲ್-ಎ-ಆಜಂ’ ಆಗಿನ ಕಾಲದ ಶ್ರೀಮಂತ ಚಿತ್ರವಾಗಿದ್ದು, ಭಾರಿ ಯಶಸ್ಸು ಕಂಡಿತ್ತು.

ಬ್ಲಾಕ್ ಅಂಡ್ ವೈಟ್ ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ 2008 ರಲ್ಲಿ ವರ್ಣರಂಜಿತಗೊಂಡು ಮತ್ತೆ ರಿಲೀಸ್ ಆದಾಗಲೂ ಭರ್ಜರಿ ಪ್ರದರ್ಶನ ಕಂಡಿತ್ತು. 1961 ರಲ್ಲಿ ಬಿಡುಗಡೆಯಾದ ‘ಗಂಗಾ ಜಮುನಾ’ ದಿಲೀಪ್ ಕುಮಾರ್ ಅವರ ಮೊದಲ ವರ್ಣಚಿತ್ರವಾಗಿದೆ. 1981ರ ನಂತರದಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. ‘ಕ್ರಾಂತಿ’,’ವಿಧಾತಾ’ ಸೇರಿ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

1966 ರಲ್ಲಿ ಅಂದಿನ ಚಿತ್ರರಂಗದ ಖ್ಯಾತ ನಟಿ ಸಾಯಿರಾಬಾನು ಅವರನ್ನು ಮದುವೆಯಾದ ದಿಲೀಪ್ ಕುಮಾರ್ ಅವರಿಗೆ 44 ವರ್ಷ ವಯಸ್ಸಾಗಿತ್ತು. ಆಗ ಸಾಯಿರಾಬಾನು ವಯಸ್ಸು 22 ವರ್ಷ ಮಾತ್ರ. ನಂತರ ದಿಲೀಪ್ ಕುಮಾರ್ 1980 ರಲ್ಲಿ ಆಸ್ಮಾ ಜೊತೆ ಎರಡನೇ ಮದುವೆಯಾದರು ಬಹುಬೇಗನೆ ಡೈವೋರ್ಸ್ ಕೊಟ್ಟರು.

8 ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ ದಿಲೀಪ್ ಕುಮಾರ್ ಅವರಿಗೆ 1992 ರಲ್ಲಿ ಫಿಲಂ ಫೇರ್ ಲೈಫ್ ಟೈಂ ಅಚಿವ್ ಮೆಂಟ್ ಪ್ರಶಸ್ತಿ ನೀಡಲಾಗಿದೆ. 1994 ರಲ್ಲಿ ಭಾರತ ಸರ್ಕಾರ ದಾದಾ ಸಾಹೇಬ್ ಪ್ರಶಸ್ತಿ, 1991 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪಾಕಿಸ್ತಾನ ಸರ್ಕಾರ 1997 ರಲ್ಲಿ ನಿಶಾನ್ ಎ ಇಂತಿಯಾಜ್ ಪ್ರಶಸ್ತಿ ನೀಡಿದ್ದು, ಅದೇ ವರ್ಷ ಎನ್ಟಿಆರ್ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಅವರು ರಾಜ್ಯಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 2015 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...