ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ಫೆಬ್ರವರಿ 28 ರಿಂದ ಆರಂಭವಾಗಲಿದೆ. ಅಂದು ಸಂಜೆ 6 ಗಂಟೆಗೆ ಶುರುವಾಗಲಿದ್ದು, ಪ್ರತಿದಿನ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ ಎಂದು ಕಲರ್ಸ್ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ.
ಈ ಬಾರಿಯೂ ಕಿಚ್ಚ ಸುದೀಪ್ ‘ಬಿಗ್ ಬಾಸ್’ ಹೋಸ್ಟ್ ಮಾಡಲಿದ್ದಾರೆ. ಕೊರೋನಾ ಕಾರಣದಿಂದಾಗಿ ಈ ಬಾರಿ ‘ಬಿಗ್ ಬಾಸ್’ ವಿಳಂಬವಾಗಿ ಆರಂಭವಾಗುತ್ತಿದೆ. 17 ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದು, ಸಂಪೂರ್ಣವಾಗಿ ಸೆಲೆಬ್ರಿಟಿಗಳ ಸೀಸನ್ ಇದಾಗಿರುತ್ತದೆ. ಸಿನಿಮಾ, ಕಿರುತೆರೆ, ರಾಜಕೀಯ, ಹಾಸ್ಯ ನಟರು, ಕ್ರೀಡೆ, ಗಾಯನ ಹೀಗೆ ಬೇರೆಬೇರೆ ರಂಗದವರು ಸ್ಪರ್ಧಿಗಳಾಗಿದ್ದಾರೆ.
ಈ ಸೀಸನ್ ನಲ್ಲಿ ಕಾಮನ್ ಮ್ಯಾನ್ ಗಳು ಇರುವುದಿಲ್ಲ. ‘ಬಿಗ್ ಬಾಸ್’ ಮನೆ ಪ್ರವೇಶಿಸುವ ಸ್ಪರ್ಧಿಗಳು ಕ್ವಾರಂಟೈನ್ ನಲ್ಲಿ ಇದ್ದಾರೆ. ಕೊನೆಯ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟರೆ ಅವರು ಹೊರಗೆ ಉಳಿಯಲಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆ ಕಾರಣ ಯಾರಿಗೂ ಮನೆ ಒಳಗೆ ಪ್ರವೇಶವಿಲ್ಲ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸ್ಪರ್ಧಿಗಳು ಕ್ವಾರಂಟೈನ್ ನಲ್ಲಿದ್ದು ಭಾನುವಾರ ಸಂಜೆಗೆ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡಲಿದ್ದಾರೆ.